ಚುನಾವಣೆ ನೀತಿಸಂಹಿತೆ ಬ್ಯಾನರ್ ತೆರವು

ಮಾನ್ವಿ,ಮಾ.೩೦- ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಅಳವಡಿಸಲಾಗಿದ್ದ ರಾಜಕೀಯ ಪಕ್ಷಗಳು, ಸರ್ಕಾರಿ ಯೋಜನೆಗಳ ಪ್ರಚಾರದ ಬ್ಯಾನರ್ ಗಳನ್ನು ಪುರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ತೆರವುಗೊಳಿಸಲಾಗುತ್ತಿದೆ.
ತಾಲೂಕಿನ ಪಟ್ಟಣ ಸೇರಿದಂತೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ.
ಕಳೆದ ಒಂದೆರಡು ತಿಂಗಳುಗಳಿಂದ ರಾಜಕೀಯ ಪಕ್ಷಗಳ ಸಮಾವೇಶ, ಜಾತ್ರೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗಳಿಗೆ ಶುಭಾಶಯ ಕೋರುವ ನೆಪದಲ್ಲಿ ರಾಜಕೀಯ ಮುಖಂಡರ ಬ್ಯಾನರ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಇದು ಜನರಿಗೆ ಕಿರಿಕಿರಿಯನ್ನೂ ಉಂಟು ಮಾಡಿತ್ತು. ಅವುಗಳನ್ನು ಸಿಬ್ಬಂದಿ ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಸರ್ಕಾರಿ ಯೋಜನೆಗಳ ಬ್ಯಾನರ್‌ಗಳಿಗೆ ಬಣ್ಣ ಬಳಿಯುವ ಕೆಲಸವನ್ನೂ ಮಾಡಲಾಗುತ್ತಿದೆ.