ಚುನಾವಣೆ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ

ದೇವದುರ್ಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಚುನಾವಣೆ ಆಯೋಗ ನಿಗದಿ ಮಾಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಚುನಾವಣಾಧಿಕಾರಿ ಚೇತನಕುಮಾರ ಸೂಚಿಸಿದರು.

ಪಟ್ಟಣದ ತಹಸಿಲ್‌ಕಚೇರಿ ಸಭಾಂಗಣದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕರೆದಿದ್ದ ವಿವಿಧ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆವಹಿಸಿ ಶುಕ್ರವಾರ ಮಾತನಾಡಿದರು. ಚುನಾವಣೆ ನ್ಯಾಯಸಮ್ಮತ, ಶಾಂತಿಯುತವಾಗಿ ನಡೆಸಲು ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಕೊಂಡಿದೆ. ಇದಕ್ಕೆ ರಾಜಕೀಯ ಪಕ್ಷಗಳು ಸಹಕಾರ ನೀಡಿ ಶಾಂತಿಯುತ ಚುನಾವಣೆಗೆ ಮುನ್ನುಡಿ ಬರೆಯಬೇಕು.

ಏ.೧೩ರಿಂದ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಏ.೨೦ ಕೊನೇ ದಿನವಾಗಿದೆ. ಏ.೨೦ರ ಮಧ್ಯಾಹ್ನ ೩ಗಂಟೆ ಒಳಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮೂರುಗಂಟೆ ಮೇಲೆಬರುವ ಯಾವುದೇ ನಾಮಪತ್ರ ಸ್ವೀಕಾರ ಮಾಡುವುದಿಲ್ಲ. ಒಬ್ಬ ಅಭ್ಯರ್ಥಿ ಕನಿಷ್ಠ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಸಾಮಾನ್ಯ ಕ್ಷೇತ್ರದಲ್ಲಿ ಹತ್ತು ಸಾವಿರ ರೂ. ಠೇವಣಿ, ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರದಲ್ಲಿ ಐದು ಸಾವಿರ ರೂ. ಠೇವಣಿ ನಿಗದಿ ಮಾಡಲಾಗಿದೆ.

ಪಕ್ಷಗಳಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಮೂವರು ಅನುಮೋಧಕರ ಮೂಲಕ ಅರ್ಜಿ ಸಲ್ಲಿಸಬೇಕು. ಪಕ್ಷೇತರರು ಕನಿಷ್ಠ ೧೦ಅನುಮೋದಕರ ಅಗತ್ಯವಿದ್ದು, ಅನುಮೋದಕರು ಕಡ್ಡಾಯವಾಗಿ ಸ್ಥಳೀಯ ಕ್ಷೇತ್ರದ ಮತದಾರರು ಆಗಿರಬೇಕು. ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ತುಂಬಬೇಕು. ಅಭ್ಯರ್ಥಿ ಎಸ್ಟಿ ಪ್ರಮಾಣಪತ್ರ ಕಡ್ಡಾಯವಾಗಿ ಸಲ್ಲಿಸಬೇಕು.

ಪ್ರಚಾರ ನಡೆಸುವ ವಾಹನ, ಬೈಕ್, ಸ್ಥಳದ ಬಗ್ಗೆ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಅನುಮತಿ ಇಲ್ಲದೆ ಬಳಸುವ ವಾಹನಗಳನ್ನು ಸೀಜ್ ಮಾಡಲಾಗುವುದು. ಅಭ್ಯರ್ಥಿ ಹೆಸರು ಘೋಷಣೆಗೆ ಮುನ್ನ ಮಾಡುವ ಖರ್ಚುವೆಚ್ಚ ಪಕ್ಷದ ಲೆಕ್ಕದಲ್ಲಿ ಬರಲಿದೆ. ಅಭ್ಯರ್ಥಿ ಘೋಷಣೆಯಾದ ನಂತರ ಎಲ್ಲ ಖರ್ಚುವೆಚ್ಚ ಅಭ್ಯರ್ಥಿ ಹೆಸರಿನಲ್ಲಿ ಸೇರಿಸಲಾಗುವುದು. ಒಬ್ಬ ಅಭ್ಯರ್ಥಿಗೆ ಕನಿಷ್ಠ ೪೦ಲಕ್ಷ ರೂ.ವರೆಗೆ ಖರ್ಚು ಮಾಡಲು ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಅಭ್ಯರ್ಥಿಯನ್ನು ಅನರ್ಹಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ವೈ.ಬಿದರಿ, ಗ್ರೇಡ್ ೨ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಪಿಐ ಕೆ.ಹೊಸಕೇರಪ್ಪ, ಬಿಇಒ ಸುಖದೇವ್, ಭೀಮನಗೌಡ ಪಾಟೀಲ್, ರಾಜಕೀಯ ನಾಯಕರಾದ ಅಬ್ದುಲ್ ಅಜೀಜ್, ಅಮರೇಶ ಪಾಟೀಲ್, ಬಸವರಾಜ ವಕೀಲ ಗೌರಂಪೇಟೆ ಇತರರಿದ್ದರು.