ಚುನಾವಣೆ ನಮ್ಮದು ಎನ್ನುವ ಸಂದೇಶ ಜನರಿಗೆ ನೀಡಿ:ಪಿ.ಎಸ್. ವಸ್ತ್ರದ

ಬೀದರ. ಮೇ. 02: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಹೆಚ್ಚಿನ ಮತದಾನ ಮಾಡಲು ಸ್ವೀಫ್ ಸಮಿತಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಮತದಾನ ನಮ್ಮದು ಎನ್ನುವ ಸಂದೇಶ ನೀಡಿ ಎಂದು ರಾಜ್ಯ ಸ್ವೀಫ್ ಸಮಿತಿ ನೋಡಲ್ ಅಧಿಕಾರಿ ನಿವೃತ್ತ ಐ.ಎ.ಎಸ್. ಅಧಿಕಾರಿ ಪಿ.ಎಸ್. ವಸ್ತ್ರದ ಹೇಳಿದರು.
ಅವರು ಬುಧವಾರ ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬೀದರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸ್ವೀಫ್ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಕೆಲವು ಅಧಿಕಾರಿಗಳನ್ನು ನಿಯೋಜನೆ ಮಾಡಿ ಹೆಚ್ಚಿನ ಸ್ವೀಫ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚು ಮತದಾನವಾಗುವಂತೆ ಮಾಡಿ. ನಮ್ಮ ಮನೆಯ ಕಾರ್ಯಕ್ರಮ ಇದ್ದಾಗ ನಾವೇ ಹೋಗಿ ಆಮಂತ್ರಣ ಕೊಡುವುದಿಲ್ಲವೆ ಹಾಗೆ ಪ್ರಜಾಪ್ರಭುತ್ವದ ಹಬ್ಬವನ್ನು ನಮ್ಮ ಮನೆಯ ಕಾರ್ಯಕ್ರಮದಂತೆ ಆಚರಣೆ ಮಾಡಬೇಕು. ಬೀದರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಸಲ ಶೇ. 75 ಪ್ರತಿಶತ ಮತದಾನವಾಗುವಂತೆ ನೋಡಿಕೊಳ್ಳಬೇಕೆಂದರು.
ಬೀದರ ಜಿಲ್ಲೆಯಲ್ಲಿ ಸ್ವೀಫ್ ಕಾರ್ಯಕ್ರಮಗಳನ್ಮು ಚೆನ್ನಾಗಿ ಮಾಡಿದ್ದಿರಾ ಇನ್ನು ಕೆಲವು ದಿನ ಸಮಯ ಇರುವುದರಿಂದ ಕಡಿಮೆ ಮತದಾನವಾದಲ್ಲಿ ಹೆಚ್ಚಿನ ಜನರು ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಹಾಗೂ ಬೇರೆ ಕಡೆ ಹೋದ ಮತದಾರರ ಹೆಸರುಗಳನ್ನು ಪಟ್ಟಿಮಾಡಿ ಅವರಿಗೆ ಮೇ.7 ರಂದು ಬಂದು ಮತದಾನ ಮಾಡಲು ತಿಳಿಸಿ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳಿರುವಂತೆ ನೋಡಿಕೊಳ್ಳಬೇಕು ವಿಶೇಷವಾಗಿ ದಿವ್ಯಾಂಗ ಮತಗಟ್ಟೆಗಳಲ್ಲಿ ಶೌಚಾಲಯಗಳು ಚೆನ್ನಾಗಿ ಇರಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಫ್ ಸಮಿತಿ ಅಧ್ಯಕ್ಷರಾದ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ, ಕಡಿಮೆ ಮತದಾನವಾದ ಮತಗಟ್ಟೆಗಳನ್ನು ದತ್ತು ಪಡೆದು ಹೆಚ್ಚಿನ ಮತದಾನವಾಗುವಂತೆ ಮಾಡಬೇಕು. ಮತದಾನಕ್ಕೆ ಇನ್ನೂ 6 ದಿನ ಕಾಲಾವಕಾಶ ಇರುವುದರಿಂದ ಹೆಚ್ಚಿನ ಸ್ವೀಫ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು. ಬಿ.ಎಲ್.ಓ ಗಳೊಂದಿಗೆ ಸಭೆ ನಡೆಸಿ ವಲಸೆ ಹೋದವರ ನ್ನು ಸಂಪರ್ಕಿಸಿ ಅವರನ್ನು ಮತದಾನ ಮಾಡುವಂತೆ ತಿಳಿಸಿ ಹೇಳಬೇಕು ಎಂದರು.
ಸಭೆ ನಡೆಸುವ ಮುನ್ನ ರಾಜ್ಯ ಸ್ವೀಫ್ ಸಮಿತಿ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರು ಈ ಹಿಂದೆ ಕಡಿಮೆ ಮತದಾನವಾದ ಬೀದರ ನಗರದಲ್ಲಿರುವ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಸ್ವೀಫ್ ಸಮಿತಿ ನೋಡಲ್ ಅಧಿಕಾರಿ ಗೌತಮ ಅರಳಿ ಅವರು ಜಿಲ್ಲೆಯಲ್ಲಿ ಹಮ್ಮಿಕೊಂಡ ವಿವಿಧ ಸ್ವೀಫ್ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು.
ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಸಿಂಧು ಎಚ್.ಎಸ್., ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಚಂದ್ರಕಾಂತ ಶಾಬಾದಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೆಶಕರಾದ ಸುರೇಖಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಸಲೀಂ ಪಾಶಾ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಅವಿನಾಶ ಹಾಗೂ ಬೀದರ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.