ಕೋಲಾರ, ಏ. ೨೭-ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಮೇ.೧೩ ರಂದು ಕೊನೆಗೊಂಡ ನಂತರ ಶೇ.೪ ತುಟ್ಟಿ ಭತ್ಯೆ ಆದೇಶವನ್ನು ೧-೧-೨೦೨೩ರಿಂದ ಜಾರಿಗೆ ಬರುವಂತೆ ಆರ್ಥಿಕ ಇಲಾಖೆ ಆದೇಶ ಹೊರಡಿಸಲಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದ್ದಾರೆ.
ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ಕಳೆದ ಏ.೩ ರಂದು ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ನೀಡಲು ಪತ್ರ ಬರೆದಿದ್ದು, ಅದರಂತೆ ಸರ್ಕಾರ ಪ್ರಸ್ತಾವನೆಯನ್ನು ರಾಜ್ಯ ಚುನಾವಣಾ ಆಯೋಗದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು ಎಂದು ತಿಳಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಂಹಿತೆ ಮುಗಿದ ನಂತರ ಬಾಕಿ ತುಟ್ಟಿಭತ್ಯೆ ಕುರಿತು ಕ್ರಮ ಕೈಗೊಳ್ಳಲು ತಿಳಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅದರೆ ರಾಜ್ಯ ಸರ್ಕಾರಿ ನೌಕರರಿಗೆ ೧-೪-೨೦೨೩ ರಿಂದ ಶೇ.೧೭ರ ಮಂಧ್ಯಂತರ ಪರಿಹಾರದ ಮೊತ್ತವನ್ನು ಏಪ್ರಿಲ್-೨೦೨೩ರ ವೇತನದಲ್ಲಿ ಸೆಳೆಯಲು ಅನುಕೂಲವಾಗುವಂತೆ ಹೆಚ್‌ಆರ್‌ಎಂಎಸ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸರ್ಕಾರಿ ನೌಕರರು ಈ ತಿಂಗಳ ವೇತನದಲ್ಲಿ ಪಡೆಯಬಹುದಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆ ನಂತರ ಕ್ರೀಡಾಕೂಟ
ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮೇ.೨೦೨೩ರ ಮಾಹೆಯಲ್ಲಿ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ನಡೆಸಲು ದಿನಾಂಕ ನಿಗಧಿಗೊಳಿಸಲಾಗುವುದು ಎಂದು ಷಡಕ್ಷರಿ ಅವರು ಜಿಲ್ಲೆಯ ನೌಕರರ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.