ಚುನಾವಣೆ ಘೋಷಣೆ ಬಳಿಕ ೨೦೦ ಕೋಟಿ ವಸ್ತುಗಳು ಜಪ್ತಿ

ಬೆಳಗಾವಿ,ಏ.೨೦:ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡ ನಂತರ ಇದುವರೆಗೂ ೨೦೦ ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗ ಈ ಬಾರಿ ಸಾಕಷ್ಟು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡಿವೆ.
ಸ್ಥಿರ ಕಣ್ಗಾವಲು ತಂಡ, ವಿಚಕ್ಷಣಾ ದಳ, ಪೊಲೀಸ್ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆ ವಿವಿಧೆಡೆ ಕಾರ್ಯಾಚರಣೆ ನಡೆಸಿ ೭೬.೭೦ ಕೋಟಿ ರೂ. ನಗದು ವಶಪಡಿಸಿಕೊಂಡಿದೆ. ಇದರ ಜತೆಗೆ ೧೯.೫ ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
೪೨.೮೨ ಕೋಟಿ ರೂ. ಮೌಲ್ಯದ ೧೦ ಲಕ್ಷ ಲೀ. ಮದ್ಯ, ೧೫.೨೫ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ೪೫.೮೧ ಕೋಟಿ ರೂ. ಮೌಲ್ಯದ ೯೫.೭೭ ಕೆಜಿ ಬಂಗಾರ, ೭.೮೯ ಕೋಟಿ ಮೌಲ್ಯದ ೫೬೧ ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ. ಇದುವರೆಗೂ ೧,೬೨೯ ಎಫ್‌ಐಆರ್ ದಾಖಲಾಗಿವೆ.
ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಬೆಳಗಾವಿಯ ರಾಮದುರ್ಗ ತಾಲ್ಲೂಕಿನಲ್ಲಿ ಸಮರ್ಪಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೧.೫೩ ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.
ರಾಮದುರ್ಗ ತಾಲ್ಲೂಕಿನ ತುರನೂರ ಅರಿಬೆಂಚಿ ರಸ್ತೆಯಲ್ಲಿ ಇನೋವಾ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ೧.೫೩ ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ.
ಹಣ ಸಾಗಿಸುತ್ತಿದ್ದ ಬೆಂಗಳೂರಿನ ನಾಗರಭಾವಿಯ ಆರೋಪಿ ಚಂದ್ರಶೇಖರಯ್ಯ, ಕಾರು ಚಾಲಕ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಬೆನಕನ ಹಳ್ಳಿ ಗ್ರಾಮದ ಕರಿಬಸವ ರಾಜನನ್ನು ಬಂಧಿಸಲಾಗಿದ್ದು, ಈ ಸಂಬಂಧ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.