
(ಸಂಜೆವಾಣಿ ಪ್ರತಿನಿಧಿಯಿಂದ)
ಹೈದರಾಬಾದ್,ಸೆ.೧೬:ಹೈದರಾಬಾದಿನಲ್ಲಿ ಇಂದಿನಿಂದ ಆರಂಭವಾಗಿರುವ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಹಾಗೂ ೫ ರಾಜ್ಯಗಳ ವಿಧಾನಸಭಾ ಚುನಾವಣೆಗೆ ರಣತಂತ್ರಗಳನ್ನು ರೂಪಿಸುವ ಬಗ್ಗೆ ಚರ್ಚೆಗಳು ನಡೆದಿವೆ.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ನೇಮಕಗೊಂಡ ನಂತರ ಮೊದಲ ಬಾರಿಗೆ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಲೋಕಸಭಾ ಚುನಾವಣೆ ಸೇರಿದಂತೆ ಮುಂಬರುವ ೫ ರಾಜ್ಯಗಳ ಚುನಾವಣಾ ಗೆಲುವಿನ ರಣತಂತ್ರಗಳನ್ನು ಅಂತಿಮಗೊಳಿಸಲಾಗುತ್ತದೆ.
ಲೋಕಸಭಾ ಚುನಾವಣೆಗೆ ಮುನ್ನ ಎದುರಾಗುವ ರಾಜಸ್ತಾನ. ಳತ್ತೀಸ್‌ಘಡ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಲೋಕಸಭಾ ಚುನಾವಣೆಯ ಗೆಲುವಿಗೆ ಮುನ್ನುಡಿ ಬರೆಯಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದು, ಅದರಂತೆ ಚುನಾವಣಾ ಗೆಲುವಿಗೆ ಏನೆಲ್ಲ ರಣತಂತ್ರಗಳನ್ನು ರೂಪಿಸಬೇಕು, ಯಾವ ಭರವೆಗಳನ್ನು ಚುನಾವಣಾ ಸಂದರ್ಭದಲ್ಲಿ ನೀಡಬೇಕು ಎಂಬ ಬಗ್ಗೆ ಚರ್ಚೆಗಳನ್ನು ಈ ಕಾರ್ಯಕಾರಿಣಿಯಲ್ಲಿ ನಡೆಸಲಾಗಿದೆ.
ಚುನಾವಣಾ ರಣತಂತ್ರಗಳ ಜತೆಗೆ ಪಕ್ಷದ ಪುನಶ್ಚೇತನ, ವಿವಿಧ ಪಕ್ಷಗಳೊಂದಿಗೆ ಮೈತ್ರಿ, ಇಂಡಿಯಾ ಒಕ್ಕೂಟ ಬಲಪಡಿಸುವಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.ಈ ಕಾರ್ಯಕಾರಿಣಿಯ ಕೊನೆಯ ದಿನವಾದ ಸೆ. ೧೯ ರಂದು ರಾಜಕೀಯ ಹಾಗೂ ಆರ್ಥಿಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಇಂದಿನಿಂದ ಆರಂಭವಾಗಿರುವ ಈ ಕಾರ್ಯಕಾರಿಣಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದಿದ್ದು, ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಸೇರಿದಂತೆ ಎಲ್ಲ ಪ್ರಮುಖ ನಾಯಕರುಗಳು ಭಾಗಿಯಾಗುತಿದ್ದು, ಹಾಗೆಯೇ ಕಾರ್ಯಕಾರಿಣಿಯ ೮೪ ಸದಸ್ಯರು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು, ವಿವಿಧ ರಾಜ್ಯಗಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರುಗಳು ಪಾಲ್ಗೊಳ್ಳುವರು.
ತೆಲಂಗಾಣ ವಿಧಾನಸಭೆಯ ಚುನಾವಣೆ ಗೆಲುವಿನ ಮೇಲೆ ಕಣ್ಣಿಟ್ಟು ಹೈದರಾಬಾದಿನಲ್ಲಿ ಈ ಕಾರ್ಯಕಾರಿಣಿಯನ್ನು ನಡೆಸಲಾಗುತ್ತಿದೆ.
ಸಿಎಂ, ಡಿಕೆಶಿ, ಹರಿಪ್ರಸಾದ್ ಭಾಗಿ
ಈ ಕಾರ್ಯಕಾರಿಣಿಯಲ್ಲಿ ರಾಜ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾರ್ಯಕಾರಿಣಿ ಸದಸ್ಯ ಬಿ.ಕೆ ಹರಿಪ್ರಸಾದ್ ಇವರುಗಳು ಭಾಗಿಯಾಗಿದ್ದಾರೆ.