ಚುನಾವಣೆ ಕರ್ತವ್ಯಕ್ಕೆ ಗೈರು ಹಾಜರಾದ ಇಬ್ಬರುಚುನಾವಣಾ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ಡಿ.ಸಿ. ಆದೇಶ

ಕಲಬುರಗಿ:ಏ.8:ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ 41-ಸೇಡಂ ಮತಕ್ಷೇತ್ರಕ್ಕೆ ಬರುವ ಮೇದಕ ಚೆಕ್‍ಪೋಸ್ಟ್‍ದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ಟ್ಯಾಟಿಕ್ ಸರ್ವೇಲೆನ್ಸ್ ಟೀಮ್ (static surveillance team) ತಂಡದಲ್ಲಿ ನಿಯೋಜಿಸಿದ ಸೇಡಂ ತಾಲೂಕಿನ ಮುಧೋಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‍ಸ್ಟೇಬಲ್ ಬಸವರಾಜ್ ಹಾಗೂ ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಿ.ಆರ್.ಸಿ. ಶಂಕರಲಿಂಗಪ್ಪ ಇವರು ಮೇದಕ ಚೆಕ್‍ಪೋಸ್ಟ್‍ದಲ್ಲಿ ಕರ್ತವ್ಯ ನಿರ್ವಹಣೆ ಮಾಡದೇ ಅನಧೀಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ನಿಯಮ 134 ರಡಿ ಅಧಿಕಾರ ಚಲಾಯಿಸಿ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.

ಅತ್ಯಂತ ಮಹತ್ವವಾದ ಸಾರ್ವತ್ರಿಕ ಚುನಾವಣೆಯ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದಲ್ಲದೇ ಮೇಲಾಧಿಕಾರಿಗಳ ಮತ್ತು ಸಹಾಯಕ ಚುನಾವಣಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಅನಧೀಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಸದರಿ ನೌಕರರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತ್ತುಗೊಳಿಸಲಾಗಿದೆ. ಸದರಿ ನೌಕರರು ಅಮಾನತ್ತು ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.