
ಭಾರತ ದೇಶದ ದಕ್ಷಿಣ ಭಾಗದ ಕಾಡು ನಾಡಿನ ಮೂಲೆಯಲ್ಲೊಂದು ಬುಡಕಟ್ಟು ಜನಾಂಗ! ಬಿಡಾರ ಹಾಕಿ ಬೀಡು ಬಿಟ್ಟು, ಹೇಗೋ ತಮ್ಮ ಬುದ್ಧಿಶಕ್ತಿ ಆಧಾರಿತ, ಮಳೆ ಬಿಸಿಲು ಗಾಳಿ ತಡೆದು ಕಾಡು ಪರಿಸರಕ್ಕೆ ಹೊಂದಿ ಕಾಡಾಗಿಯೇ ಬದುಕುತಿತ್ತು! ಆ ನಾಡನಾಳ್ವ ದೊರೆ, ಅವರನ್ನು ಅದೆಷ್ಟು ನಾಡ ನಾಗರೀಕತೆಯ ಬೀಡಿಗೆ ತರಲು ಪ್ರಯತ್ನ ಮಾಡಿದನು! ಆದರೆ, ಆ ಗುಂಪು ನಾಡ ಜನರ ನಾನಾ ವೇಷ ಭೂಷಣ ಭಾಷೆ ಆಚಾರದೊಂದಿಗೆ ಬೆರೆಯದೆ ಮತ್ತೆ ಆ ಬೀಡಿಗೆ, ಒಗ್ಗಿದ ತಮ್ಮದೇ ತವರಿನ ಸಂಸ್ಕೃತಿ ಗೂಡಿಗೆ, ಹಿತದ ಮದ್ದಿನ ಹಿತ್ತಲಿಗೆ ಸರಿದಂತೆ ಸರಿಯುತಿತ್ತು! ಸುಮಾರು ಐದು ನೂರಕ್ಕೂ ಹೆಚ್ಚಿದ್ದ ಆ ಹಿರಿದಾದ ಗುಂಪಿಗೆ ನಾಗರೀಕತೆ ಜೀವನ ಕರುಣಿಸಲೇಬೇಕೆಂದು ಸಂಕಲ್ಪ ತೊಟ್ಟ ಆ ನಾಡ ದೊರೆಯು, ಮೊದಲು ಅವರಿದ್ದ ಕಡೆಯೇ ಅವರ ಸಂಸ್ಕೃತಿಗೆ ಧಕ್ಕೆ ಆಗದಂತೆ, ಪೂರಕ ಶಾಲೆ ತೆರೆಸಿದನು! ಅವರಿಗೆ ಅಕ್ಷರಾಭ್ಯಾಸ ಮಾಡಿಸಿದನು. ಬೇರೆ ಬೇರೆ ಭಾವ ಭಾಷೆ ಅರಿಯುವಂತೆ ಮಾಡಿದನು. ಮಾನವತಾ ಜಗದ ಜ್ಞಾನ ನೀಡಿಸಿದನು! ಎಲ್ಲರ ಜೊತೆ ಬೆರೆಯುವಂತೆ ಕಲಿಸಿದನು! ಆಗ ಬುಡಕಟ್ಟಿನ ನಾಯಕನಿಗೆ ನಾಡ ದೊರೆಯ ಮೇಲೆ ಪ್ರೀತಿ ವಿಶ್ವಾಸ ಮೂಡಿ, ನಮಗೆ ಒಳ್ಳೆಯದು ಮಾಡಿದ ನಿನಗೇನು ಉಡುಗೊರೆ ಬೇಕು !? ಎಂದು ಕೇಳಿದನು. ಅದಕ್ಕೆ ನಾಡ ದೊರೆಯು ” ನಮ್ಮದು ಭಾರತ ದೇಶ. ನಾವೆಲ್ಲರೂ ಒಟ್ಟಾಗಿ ಬೆರೆತು ಒಂದಾಗಿ ಬಾಳಬೇಕು. ಅಖಂಡ ಭಾರತದ ಭವ್ಯ ಪ್ರಜೆಗಳು ಅನ್ನಿಸಬೇಕಾದರೆ ಹೀಗೆ ಯಾರನ್ನೂ ಸೇರದಂತೆ ಒತ್ತಟ್ಟಿಗೆ ಇದ್ದು ಬದುಕಬಾರದು. ಕಾಡು ಪ್ರಾಣಿಗಳಿರುವ ಈ ಕಾಡನ್ನು ಕಾಡು ಪ್ರಾಣಿಗಳು ಮಾತ್ರವೇ ಮುಕ್ತವಾಗಿ ಬದುಕಲು ಬಿಟ್ಟು ನೀವೆಲ್ಲಾ ನಾಡೊಳಗೆ ಬನ್ನಿ” ಎಂದನು! ಆಗ ಬುಡಕಟ್ಟು ಜನಾಂಗದ ನಾಯಕ ಆಗಲಿ ಬರುತ್ತೇವೆ! ಆದರೆ ನಮ್ಮದು ಕೆಲವು ಷರತ್ತುಗಳಿವೆ! ಅದಕ್ಕೆ ನೀನು ಒಪ್ಪಬೇಕು ಎಂದಾಗ, ನಾಡ ದೊರೆಯು-ಏನು ಷರತ್ತುಗಳು? ಎಂದಾಗ ಬುಡಕಟ್ಟು ನಾಯಕನು- *ನಿನ್ನ ರಾಜ್ಯದಲ್ಲಿ ನಾವು ಬಂದಾಗ, ನಮಗೆ ಎಲ್ಲ ತರಹದ ನ್ಯಾಯ ಧರ್ಮಸಮ್ಮತ ಮಾನವೀಯ ಸ್ವತಂತ್ರ ಇರಬೇಕು, *ನಮ್ಮ ಸಂಸ್ಕೃತಿಯಂತೆ ನಮ್ಮನ್ನು ಬದುಕಲು ಬಿಡಬೇಕು, *ನಾವೆಲ್ಲರೂ ನಾಡೊಳಗೆ ಬಂದು ನಿಮ್ಮ ಸಿಮೆಂಟ್, ಕಾಂಕ್ರೀಟ್ ನೆಲದಲ್ಲಿ ಬದುಕಲು ನಮಗೆ ಕಷ್ಟವಾಗುತ್ತದೆ. ನಾವೆಲ್ಲಾ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ತಿಂದು ಬದುಕುವುದನ್ನು ನಿಲ್ಲಿಸುತ್ತೇವೆ. ಆದ್ದರಿಂದ ನಾವೆಲ್ಲಾ ಉಳುಮೆ ಮಾಡಿಕೊಂಡು ಉಣ್ಣಲು, ಹೊಲಗಳನ್ನು ಕೊಡಬೇಕು *ಆರೋಗ್ಯಕರ ಜೀವನಕ್ಕಾಗಿ ಮದ್ಯಪಾನ, ತಂಬಾಕಿನ ಪದಾರ್ಥಗಳನ್ನು ತಯಾರು ಮಾಡುವಂತಿಲ್ಲ; ಮಾರಾಟವನ್ನೂ ಮಾಡುವಂತಿಲ್ಲ. ತಂಬಾಕನ್ನೇ ಬೆಳೆಯುವಂತಿಲ್ಲ. ಆರೋಗ್ಯಕರ ಬೆಳೆಗಳನ್ನೇ ನಾಡಿನಲ್ಲಿ ಬೆಳೆಯಬೇಕು *ನಮ್ಮನ್ನು ಬುಡಕಟ್ಟು ಜನಾಂಗವೆಂದು ನಾಡೊಳಗೆ ಮತ್ತೆ ಕೊನೆಯ ನೆಲೆಯಲ್ಲಿ ಇರಿಸುವಂತಿಲ್ಲ! *ಸಾಮರ್ಥ್ಯ ಇದ್ದವರು ನಾಯಕರಾಗಲು, ಕಲಿತ ವಿದ್ಯೆಗೆ ತಕ್ಕ ಕೆಲಸ ಮಾಡಲು ಅವಕಾಶ ಇರಬೇಕು * ಪ್ರತಿಭೆ ಆಧಾರಿತ ಮಾತ್ರವೇ ಪುರಸ್ಕಾರ ಸಮ್ಮಾನ ಇರಬೇಕು; ಅದಕ್ಕಾಗಿ ಜಾತಿ ಆದಾಯ ಪ್ರಮಾಣ ಪತ್ರಗಳನ್ನು ಕೇಳುವಂತಿಲ್ಲ! * ಎಲ್ಲಾ ಬಡವರಿಗೆ ಜೀವನಾವಶ್ಯಕ ಸೌಲಭ್ಯಗಳನ್ನು ಒದಗಿಸಲು ಮಾತ್ರವೇ ಆದಾಯ ಪ್ರಮಾಣ ಪತ್ರ ಕೇಳಬೇಕೇ ಹೊರತು, ಜಾತಿ ಪ್ರಮಾಣ ಪತ್ರ ಕೇಳುವಂತಿಲ್ಲ! * ಜಾತಿ ಪ್ರಶ್ನೆ ಬರುವಂತೆ, ಅದರ ಪ್ರಮಾಣ ಒದಗಿಸುವಂತೆ ಎಲ್ಲೂ ವ್ಯವಸ್ಥೆಗಳೇ ಇರಬಾರದು! *ಶಾಲೆ ಎಲ್ಲರೂ ಚನ್ನಾಗಿ ಕಲಿಯಲು ಮುಕ್ತ ಅವಕಾಶ ಒದಗಿಸಬೇಕು! * ಹುದ್ದೆಗಳೆಲ್ಲಾ ಕೇವಲ ಅವರವರ ಪ್ರತಿಭೆ ಸಾಮರ್ಥ್ಯ ಆಧರಿಸಿಯೇ ಇರಬೇಕು. *ವಂಶಪಾರಂಪರ್ಯ ರಾಜಾಡಳಿತ ಇರಬಾರದು. ಅದಕ್ಕಾಗಿ ರಾಜಾಡಳಿತಕ್ಕೆ ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ತರಬೇಕು. *ಪ್ರಜೆಗಳೇ ತಮ್ಮ ನಾಡ ನಾಯಕನನ್ನು ಚುನಾವಣೆಯಲ್ಲಿ ಮತದಾನದ ಮೂಲಕ ಆಯ್ಕೆ ಮಾಡುವಂತೆ ಆಗಬೇಕು. * ಈ ಚುನಾವಣೆಯು ಐದು ವರ್ಷಗಳಿಗೊಮ್ಮೆ ನಡೆಯಬೇಕು. *ಜಾತಿ, ಭಾಷೆ, ಅಂತಸ್ತು ಎನ್ನುವ ಯಾವುದೇ ಮೇಲು ಕೀಳು ಇರದಂತೆ, ಲಿಂಗ ತಾರತಮ್ಯ ಮಾಡದಂತೆ ಅವರವರ ಜ್ಞಾನ, ಸಾಮರ್ಥ್ಯಕ್ಕನುಸಾರ ಎಲ್ಲವನ್ನೂ ಅವರಿಚ್ಛೆಯಂತೆ ಪಡೆಯಲು ಅವಕಾಶ ಆಗಬೇಕು. *ಚುನಾವಣೆಯಲ್ಲಿ ಮತದಾನಕ್ಕೆ ನಾಯಕನ ಆಯ್ಕೆಗೆ ಅನುಕೂಲವಾಗುವಂತೆ ಪಕ್ಷಗಳು ಒಂದು ಗುರುತಿನಂತೆ ಇರಬೇಕೇ ಹೊರತು, ಮಾನವ ಜನಾಂಗದ ವಿನಾಶಕ್ಕೆ ಕಾರಣವಾಗುವಂತೆ ಇರಬಾರದು *ಅವು ಯಾವುದೇ ಜಾತಿ ಆಧಾರಿತ ಆಗದೆ, ಮತೀಯ ಗಲಭೆ ಸೃಷ್ಠಿಸದೆ, ಆರೋಗ್ಯಕರ ಆಡಳಿತ ವಿಧಾನದ ನಾನಾ ವಿಧಾನಸೂಚಿಗಳಂತೆ ಇರಬೇಕು. ಪ್ರಜಾಪ್ರಭುತ್ವದಲ್ಲಿ ನ್ಯಾಯ ಸಮ್ಮತ, ಸತ್ಯ ಧರ್ಮ ಸಮ್ಮತ ಮಾನವತೆ ಎಂಬುದು ಒಂದೇ ಮುಖ್ಯವಾಗಿ, ನಾಡನ್ನು ಕಾಳಜಿ ಮಾಡಬೇಕು. ಹೀಗಿದ್ದರೆ ಮಾತ್ರ, ನಾವು ನಾಡೊಳಗೆ ಬರುತ್ತೇವೆ, ಎಂದನು! ಅದಕ್ಕೆ ರಾಜನು-ಆಗಲಿ! ನಿನ್ನ ಷರತ್ತುಗಳಲ್ಲಿ ನಾಡಿನ ಹಿತವೇ ಇದೆ. ನಮ್ಮ ಮಂತ್ರಿಗಳಿಗೂ ತಿಳಿಯದ ರಾಜತಾಂತ್ರಿಕ ಜ್ಞಾನ ನಿನಗಿದೆ! ಪ್ರಕೃತಿಯಿಂದ ಬಂದ ನಮಗೆಲ್ಲಾ ಪ್ರಕೃತಿ ಗುಣಗಳೇ ಇರಬೇಕು ಎಂಬುದನ್ನು ನೀನು ಹೇಳಿದ್ದೀಯಾ ಹಾಗೆ ಆಗಲಿ ಎಂದನು! ಮರುದಿನವೇ ನಾಡಿನಾಳ್ವಿಕೆಯನ್ನು ರಾಜಾಡಳಿತ ವಿಧಾನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ತರಲು ಬೇಕಾದ ಎಲ್ಲ ಯೋಜನೆ ರೂಪಿಸಿ, ಚುನಾವಣಾ ಆಯೋಗವನ್ನು ನೇಮಿಸಿ, ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಿದನು! ಚುನಾವಣೆಯ ದಿನಾಂಕವನ್ನು ಮೇ ತಿಂಗಳು 10 ನೇ ತಾರೀಖು ಎಂದು ಘೋಷಿಸಿದನು. ಪ್ರತಿಯೊಬ್ಬರೂ ಮತದಾನವನ್ನು ಪ್ರಾಮಾಣಿಕವಾಗಿ ಮಾಡಬೇಕು. ಯಾವುದೇ ಪಕ್ಷದವರಾಗಲೀ, ಕೇವಲ ತಮ್ಮ ಪಕ್ಷದ ಅಭ್ಯರ್ಥಿಯ ಇದೂವರೆಗಿನ ಸೇವಾ ವ್ಯಕ್ತಿತ್ವ, ಸಾಮರ್ಥ್ಯ ಸಾಧನೆಗಳ ಪರಿಚಯವನ್ನು ನೀಡಿ, ವಂಚನೆಯಿಲ್ಲದಂತೆ, ನೆರವೇರಲು ಸಾಧ್ಯವಾಗಬಹುದಾದಂತಹ ವಿವೇಕ ವಿವೇಚನೆಯುತ ಆಶ್ವಾಸನೆ ಭರವಸೆಗಳ ಮಾತುಗಳಿಂದ/ ಕರಪತ್ರಗಳ ಹಂಚಿಕೆಯಿಂದ ಮಾತ್ರವೇ ಶಿಸ್ತು ಶಾಂತಿಯಿಂದ ಮತಪ್ರಚಾರ ಮಾಡಿ, ಜನರಿರುವ ಕಡೆಗೇ, ಅವರ ಮನೆ ಮನೆ ಬಳಿಗೆ ಹೋಗಿ, ಮತಯಾಚಿಸಬೇಕೇ ಹೊರತು, ಯಾವುದೇ ಕಾರಣಕ್ಕೂ ವಸ್ತು, ಹಣ ನೀಡಿ ಆಮಿಷಗಳಿಂದ ಮತಯಾಚನೆ ಮಾಡುವಂತಿಲ್ಲ. ಅದಕ್ಕಾಗಿ ದೊಡ್ಡ ದೊಡ್ಡ ವೇದಿಕೆ ನಿರ್ಮಿಸಿ, ಹಣ ವ್ಯರ್ಥ ಮಾಡಿ, ಕಾರ್ಯಕ್ರಮ ಮಾಡುವಂತಿಲ್ಲ! ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಬೇಕು, ಯಾರು ಮತದಾನ ಮಾಡಲು ಅಶಕ್ತರೋ ಅವರಿಗೆ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಬೇಕು. ಮತದಾನ ದಿನದಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯೊಳಗೆ ಮತದಾನ ಕಾರ್ಯವು ಗೌಪ್ಯವಾಗಿ ಪ್ರತಿ ಪ್ರಜೆಯಿಂದ ನಡೆಯಬೇಕು. ಎಂಬೆಲ್ಲಾ ಚುನಾವಣಾ ನೀತಿ ಸಂಹಿತೆಯ ಯೋಜನೆಯಂತೆ ಚುನಾವಣಾ ವಿಧಾನದ ಮೂಲಕ ಸುಭದ್ರವಾದ ಪ್ರಜಾಪ್ರಭುತ್ವ ಸರ್ಕಾರವನ್ನು ತರಲು ಚುನಾವಣಾ ಆಯೋಗವು ವ್ಯವಸ್ಥೆ ಮಾಡಿತು. ಅಕ್ಷರಸ್ಥರ ಮೂಲಕ ಅನಕ್ಷರಸ್ಥರಿಗೆ ಹೇಗೆ ಮತದಾನ ಮಾಡಬೇಕು ಎಂಬುದರ ಬಗ್ಗೆ ತರಬೇತಿಯನ್ನು ಮನೆಮನೆಗೂ ಹೋಗಿ ಕೊಡಿಸಲಾಯಿತು. ಮತದಾನ ನಡೆಸುವ ಸಿಬ್ಬಂದಿಗೂ ತರಬೇತಿ ಕೊಡಿಸಲಾಯಿತು. ನಂತರ ಮೇ 10 ರಂದು ಯಾವುದೇ ತೊಂದರೆಯಿಲ್ಲದಂತೆ ಮತದಾನ ಕಟ್ಟಾಜ್ಞೆಯಲ್ಲಿ ನಡೆಯಿತು. ಮರುದಿನ ಮತ ಎಣಿಕೆಯ ಕಾರ್ಯವನ್ನು ಚುನಾವಣಾ ಆಯೋಗ ನಡೆಸಿತು. ಅತಿ ಹೆಚ್ಚು ಮತಗಳನ್ನು ನೀಡಿ ಯೋಗ್ಯ ಅಭ್ಯರ್ಥಿಯನ್ನು ಆ ನಾಡಿನ ಜನರು ಪಕ್ಷಪಾತವಿಲ್ಲದೆ ಆಯ್ಕೆ ಮಾಡಿದ್ದರು! ಅವನಿಗೆ ನಾಡಿನ ನಾಯಕನ ಪದವಿ ನೀಡಿ ಗೌರವಿಸಿದರು; ಆದರಿಸಿದರು; ಪ್ರಜಾಪ್ರಭುತ್ವ ಸರ್ಕಾರದ ನಡಾವಳಿಗಳನ್ನು ಹೃತ್ಪೂರ್ವಕವಾಗಿ ಅಪ್ಪಿಕೊಂಡು ಪಾಲಿಸಿದರು; ಎಲ್ಲರೂ ಒಂದಾಗಿ ನಾಡ ಪ್ರಗತಿಯೊಂದೇ ಗಮನವಾಗಿ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ದುಡಿದರು; ವಂಚನೆ ಮಾಡದೆ ನ್ಯಾಯಬದ್ಧ ತೆರಿಗೆಯನ್ನೂ ಕಟ್ಟಿದರು! ತಮಗೆ ಬೇಕಾದ ಜೀವನ ಸೌಲಭ್ಯಗಳನ್ನು ಯೋಗ್ಯ ನಾಯಕನ ಸಮರ್ಥ ಆಡಳಿತದಿಂದ ಪಡೆದರು! ಇಂತಹ ತಿಳಿವಿನ ಜನರ ವೈಶಾಲ್ಯ ಮನಸ್ಸುಗಳಿಂದ, ಅವರ ಉತ್ತಮ ಚಿಂತನೆ, ವಿವೇಕ ಹೊಂದಿಕೆ ಸಾಮರಸ್ಯ ಭಾವನೆಗಳ ದುಡಿಮೆಯಿಂದ ನಾಡು ಸಮೃದ್ಧಿ ಕಂಡಿತು! ಬುಡಕಟ್ಟು ನಾಯಕ ತನ್ನ ಗುಂಪಿನೊಂದಿಗೆ “ಹಾಲೊಳಗೆ ಸಕ್ಕರೆ ಬೆರೆತಂತೆ” ಆ ನಾಡೊಳಗೆ ಬೆರೆತು ಹೋದನು! ಸುಭದ್ರ ಸುರಕ್ಷತೆಯ ಪ್ರಜಾಪ್ರಭುತ್ವ ಸರ್ಕಾರ ಅಲ್ಲಿ ನಾಡ ಜನರ ಮಾನವತಾ ನಡೆಯಿಂದ ಅರ್ಥಪೂರ್ಣವಾಗಿ ನೆಲೆಗೊಂಡಿತ್ತು!
ಅಲ್ಲಿ ಕಾಡು ಕಾಡೆನಿಸಿತ್ತು!
ನಾಡು ನಾಡೆನಿಸಿತ್ತು!!
ಮನುಷ್ಯರೆಲ್ಲರೂ ಮನುಷ್ಯರೇ ಅನ್ನಿಸಿದ್ದರು!!!
ಮನುಷ್ಯ ಜಾತಿ ತಾನೊಂದೇ ವಲಂ,,, ! ಎಂಬ ಪಂಪನ ನುಡಿ ಅನುಭಾವದೊಂದಿಗೆ ಬದುಕಿತ್ತು! ಬೆಳಗಿತ್ತು!!
*********************************************
* ಲೇಖಕಿ: ಶ್ರೀಮತಿ.ಎ.ಸಿ.ಶಶಿಕಲಾ ಶಂಕರಮೂರ್ತಿ ಶಿಕ್ಷಕಿ, ಸಾಹಿತಿ, ದಾವಣಗೆರೆ.