ಚುನಾವಣೆ ಆಯೋಗದಿಂದ ಪಾರದರ್ಶಕ ಚುನಾವಣೆ ನಡೆಸಲು ಸಕಲ ಸಿದ್ದತೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.10: ನಿಷ್ಪಕ್ಷಪಾತ ಚುನಾವಣೆ ನಡೆಸಲು ಚುನಾವಣೆ ಆಯೋಗವು ಜಾರಿಗೆ ತಂದಿರುವ ನೀತಿ ಸಂಹಿತೆಗಳ ಪ್ರಕಾರ ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ತಾಲೂಕು ಚುನಾವಣಾಧಿಕಾರಿಯಾದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್ ತಿಳಿಸಿದರು.
ನಗರದ ತಾಲೂಕು ಚುನಾವಣಾ ಕಛೇರಿಯಲ್ಲಿ ಗುರುವಾರ ಕರೆದಿದ್ದ ಸರ್ವಪಕ್ಷಗಳ ರಾಜಕೀಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಶೀಘ್ರದಲ್ಲಿಯೇ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದ್ದು, ಚುನಾವಣೆ ಘೋಷಣೆಯಾದ ನಂತರ ನೀತಿ ಸಂಹಿತೆ ಜಾರಿಗೆ ಬರಲಿದೆ.
ರಾಜ್ಯ ಚುನಾವಣಾ ಆಯೋಗವು ತಾಲೂಕಿನಲ್ಲಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದೆ.  ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಅಕ್ರಮಗಳು ನಡೆಯದಂತೆ ಅಧಿಕಾರಿಗಳ ವಿವಿಧ ತಂಡಗಳನ್ನು ರಚನೆ ಮಾಡಲಾಗುವುದು, ಈ ಬಾರಿ 80ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೆ ಕುಳಿತು ಮತದಾನ ಮಾಡಲು ಚುನಾವಣಾ ಆಯೋಗವು ಅವಕಾಶ ಮಾಡಿಕೊಟ್ಟಿದೆ.  ತಾಲೂಕಿನಲ್ಲಿ ಒಟ್ಟು 3123 ಜನ 80ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು 3817ಜನ ಅಂಗವಿಕಲರಿದ್ದಾರೆಂದು ಸಮಿಕ್ಷೆಯಿಂದ ತಿಳಿದು ಬಂದಿದೆ, ಇವರೆಲ್ಲರು ಮನೆಯಲ್ಲೆ ಕುಳಿತು ಮತದಾನ ಮಾಡಲು 11ಬಿ ಫಾರಂನ್ನು ಕೊಡಲಾಗುವುದು, ಇದಕ್ಕೆ ಸಂಬಂಧಿಸಿದಂತೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು.
ಇ.ವಿ.ಎಂ. ಮತಯಂತ್ರದ ಮೂಲಕ ಮತದಾನ ನಡೆಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಇ.ವಿ.ಎಂ. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೆ ಸೆಕ್ಟರ್ ಅಧಿಕಾರಿಗಳು ಕಾರ್ಯನಿರತರಾಗಿದ್ದು, ತಾಲೂಕಿನ ಅನೇಕ ಗ್ರಾಮಗಳಲ್ಲಿ ಇ.ವಿ.ಎಂ.ಮತ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಒಟ್ಟು 22 ಸೆಕ್ಟರ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಮಾಹಿತಿ ನೀಡಿದರು.
ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಮಾತನಾಡಿದರು. ತಾ.ಪಂ. ಇ.ಒ. ಎಂ.ಬಸಪ್ಪ, ಸಮಾಜ ಕಲ್ಯಾಣಾಧಿಕಾರಿ ರಾಜೇಶ್ವರಿ, ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಬಿ.ಎನ್.ಕುಮಾರ್, ಯಲ್ಲಪ್ಪ, ಶೇಕಪ್ಪ, ಶಿವಪ್ಪ, ಶಿವನ್ನಾರಾಯಣ, ದೊಡ್ಡ ರಾಮು, ಮುತ್ತು ಇನ್ನಿತರರು ಇದ್ದರು.