ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಅನಿತಾ ಸ್ಪಷ್ಟನೆ

ಬೆಂಗಳೂರು,ಏ.೪:ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿಲ್ಲ. ಚುನಾವಣಾ ಕಣಕ್ಕಿಳಿಯುತ್ತೇನೆ ಎಂಬುದು ವದಂತಿ ಎಂದು ಜೆಡಿಎಸ್‌ನ ಶಾಸಕಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ತಾವು ಪ್ರತಿನಿಧಿಸುತ್ತಿರುವ ರಾಮನಗರ ಕ್ಷೇತ್ರವನ್ನು ತಮ್ಮ ಪುತ್ರ ನಿಖಿಲ್‌ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ದೇನೆ. ಪುನಃ ಚುನಾವಣೆಯಲ್ಲಿ ಸ್ಪರ್ಧಿಸುವ ಮಾತೆಲ್ಲಿ ಎಂದು ಅವರು ಟ್ವಿಟರ್‌ನಲ್ಲಿ ಹೇಳಿ, ನಾನು ಮತ್ತೆ ಚುನಾವಣೆಗೆ ನಿಲ್ಲುತ್ತೇನೆ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು ಮತ್ತು ಅಪಪ್ರಚಾರದ ಭಾಗ ಎಂದಿದ್ದಾರೆ.
೨೦೦೮ರಲ್ಲಿ ಆಪರೇಷನ್ ಕಮಲದ ಉಪಚುನಾವಣೆಯಲ್ಲಿ ನಾನು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶ ಗೌರವಿಸಿ ಮಧುಗಿರಿಯಿಂದ ಸ್ಪರ್ಧಿಸಿದ್ದೆ. ನಂತರ ಮಧುಗಿರಿ ಕ್ಷೇತ್ರವನ್ನು ವೀರಭದ್ರಯ್ಯರವರಿಗೆ ಬಿಟ್ಟುಕೊಟ್ಟು ಪಕ್ಷದ ಕೆಲಸ ಮನೆಗಷ್ಟೇ ಸೀಮಿತವಾಗಿದೆ. ೨೦೧೩ರಲ್ಲಿ ಕೂಡ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚೆನ್ನಪಟ್ಟಣದಲ್ಲಿ ಸ್ಪರ್ಧಿಸಿದೆ. ೨೦೧೮ರ ಉಪಚುನಾವಣೆ ವೇಳೆ ರಾಮನಗರ ಕ್ಷೇತ್ರದಲ್ಲಿ ಕೆಲವರು ಬೆನ್ನಿಗೆ ಇರಿಯುವ ಕೆಲಸವೆಸಗಿದಾಗ ಮತ್ತೆ ಪಕ್ಷದ ವರಿಷ್ಠರ ಅಣತಿಯಂತೆ ಸ್ಪರ್ಧಿಸಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.