ಚುನಾವಣೆಯಲ್ಲಿ ಸೋಲು-ಗೆಲುವು ಸಹಜ; ಸಂಸದ ಜಿ.ಎಂ ಸಿದ್ದೇಶ್ವರ್

ದಾವಣಗೆರೆ.ಮೇ.೨೮: ಒಳ ಮೀಸಲಾತಿ ಘೋಷಣೆ ಮತ್ತು ತಡವಾಗಿ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಕಾರಣದಿಂದಲೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣಬೇಕಾಯಿತು. ಆದರೆ, ಬರುವ ಲೋಕಾಸಭಾ ಚುನಾವಣೆಯಲ್ಲಿ ಇಂಥ ತಪ್ಪು ಪುನರಾವರ್ತನೆ ಆಗಬಾರದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು. ಇಲ್ಲಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪರಾಭವ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಅವರು ಚುನಾವಣೆಯಲ್ಲಿ ಶ್ರಮಿಸಿದ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಮತ ನೀಡಿದ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬಿಜೆಪಿ ಸರ್ಕಾರದ ಚುನಾವಣೆ ಅವಧಿಯಲ್ಲಿಯೇ ಒಳ ಮೀಸಲಾತಿ ಘೋಷಣೆ ಮಾಡಿರುವುದು ಪಕ್ಷಕ್ಕೆ ಹೊಡೆತಕೊಟ್ಟಿತು. ಅಲ್ಲದೇ, ಅಭ್ಯರ್ಥಿಗಳ ಹೆಸರನ್ನು ತಡವಾಗಿ ಘೋಷಣೆ ಮಾಡಿತು. ಇದರ ಜೊತೆಗೆ ಕಾಂಗ್ರೆಸ್ ಮನೆಮನೆಗೂ ಗ್ಯಾರಂಟಿ ಕಾರ್ಡುಗಳನ್ನು ತಲುಪಿಸಿ ಮತದಾರರನ್ನು ಸೆಳೆಯಿತು ಇಂಥ ಹಲವು ಕಾರಣಗಳಿಂದಾಗಿ ಬಿಜೆಪಿ ಸೋಲು ಅನುಭವಿಸಬೇಕಾಯಿತು ಎಂದು ವಿಶ್ಲೇಷಿಸಿದರು.ಈಗ ಮುಂದೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸೇರಿದಂತೆ ಬರುವ ವರ್ಷ ಲೋಕಸಭಾ ಚುನಾವಣೆಯೂ ಹತ್ತಿರದಲ್ಲಿದೆ. ವಿಧಾನಸಭಾ ಚುನಾವಣೆಯಲ್ಲಿ ಆದಂತೆ ಆಗದೆ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಮುಂಗಡವಾಗಿ ಘೋಷಿಸಬೇಕು. ಹಾಗಿದ್ದರೆ ಹಿರಿಯ ಮುಖಂಡರು, ಕಾರ್ಯಕರ್ತರು ಸಕ್ರಿಯವಾಗಿ ತೊಡಗಿ, ಅಭ್ಯರ್ಥಿಗೆ ಸಹಕಾರ ನೀಡಿ ಬೆಂಬಲಿಸಿ ಗೆಲ್ಲಿಸಬಹುದು ಎಂದು ಅಭಿಪ್ರಾಯಿಸಿದರು.ಚುನಾವಣೆ ಅಂದ ಮೇಲೆ ಸೋಲು-ಗೆಲುವು ಸಹಜ. ಸೋತಾಗ ಹಿಂದೆ ಸರಿಯಬಾರದು. ಉತ್ತರ ಶಾಸಕರು, ಸಚಿವರೂ ಆಗಿದ್ದ ಎಸ್.ಎ. ರವೀಂದ್ರನಾಥ್ ಅವರು ಕೂಡ ಸೋಲು ಕಂಡಿದ್ದರು ಹಾಗೆಂದ ಮಾತ್ರಕ್ಕೆ ಅವರು ಮನೆಯಲ್ಲಿ ಕೂರದೆ ಸಕ್ರಿಯವಾಗಿ ಓಡಾಡಿಕೊಂಡು ಪಕ್ಷ ಸಂಘಟಿಸಿದರು. ಸೋಲಿನ ಬಗ್ಗೆ ಹತಾಶರಾಗಬಾರದು. ಸೋತ ನಂತರ ಗೆಲುವು ಸಿಕ್ಕೇ ಸಿಗಲಿದೆ ಎಂದು ಕಿವಿಮಾತು ನೀಡಿದರು.ಈ ಚುನಾವಣೆಯಲ್ಲಿ ನಾವು ಸೋತಿರಬಹುದು ಹಾಗೆಂದ ಮಾತ್ರಕ್ಕೆ ಕೈಕಟ್ಟಿ ಕೂರುವುದಿಲ್ಲ. ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ತಲುಪಿಸದಿದ್ದರೆ ರಾಜ್ಯಾದ್ಯಂತ ಗ್ಯಾರಂಟಿಗಳನ್ನು ತಲುಪಿಸಬೇಕೆಂದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ,ನಾನು ಐದು ಚುನಾವಣೆಯಲ್ಲಿ ಸೋತಿದ್ದು, ಐದು ಚುನಾವಣೆಗಳನ್ನು ಗೆದ್ದಿದ್ದೇನೆ. ಸೋತೆವು ಎಂದು ಧೃತಿಗೆಟ್ಟು ಹಿಂದೆ ಸರಿದರೆ ಅದನ್ನೇ ಕಾಯುತ್ತಿರುವವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಛಲಬಿಡದೆ ಮುಂದೆ ಬರಬೇಕು. ಯಾಋನ್ನೂ ದೂಷಣೆ ಮಾಡದೆ ಪಕ್ಷದಲ್ಲಿ ಸಕ್ರಿಯವಾಗಿದ್ದರೆ ಪಕ್ಷ ಎಂದಿಗೂ ಕೈಬಿಡುವುದಿಲ್ಲ ಎಂದು ಸಲಹೆ ನೀಡಿದರು.ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಮಾತನಾಡಿ, ಈ ಚುನಾವಣೆಯಲ್ಲಿ ಟಿಕೇಟ್ ಘೋಷಣೆ ತಡವಾದ ಕಾರಣ ನನಗೆ ಪ್ರಚಾರ ಮಾಡಲು ಸಮಯಾವಕಾಶದ ಕೊರತೆ ಉಂಟಾಯಿತು. ಅಲ್ಲದೇ, ಒಳ ಮೀಸಲಾತಿ ಘೋಷಣೆಯಿಂದಲೂ ಸಾವಿರಾರು ಮತಗಳು ನನ್ನ ಕೈತಪ್ಪಿದವು. ಈ ಚುನಾವಣೆಯಲ್ಲಿ ಹಣಬಲ, ತೋಳ್ಬಲದಿಂದ ನಮ್ಮ ಎದುರಾಳಿ ಪಕ್ಷದವರು ಗೆದ್ದಿರಬಹುದು, ಆದರೆ. ಅಂತವರ ಮುಂದೆ ಒಬ್ಬ ರೈತನ ಮಗನಿಗೆ ನಮ್ಮ ಪಕ್ಷ ಟಿಕೆಟ್ ಕೊಟ್ಟು ನಿಲ್ಲಿಸಿತ್ತು. ನನಗೆ ಸುಮಾರು ೭೦ ಸಾವಿರ ಮತಗಳು ಬಂದಿವೆ ಅಂದರೆ ಇದು ನಿಜಕ್ಕೂ ಸೋಲಲ್ಲ ಎಂದು ಸಮರ್ಥಿಸಿಕೊಂಡರು.ಈ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲರಿಗೂ ಮಂಕುಬೂದಿ ಎರಚಿ ಗೆದ್ದಿದೆ. ಅವರ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿವ ಸಲುವಾಗಿ ನಾವು ಹೋರಾಟ ಮಾಡೋಣ. ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಎದೆಗುಂದದೆ ಬರುವ ಲೋಕಸಭೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲಿಸಲು ಎಲ್ಲರೂ ಸಕ್ರಿಯರಾಗೋಣ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಉತ್ತರ ಮಂಡಲ ಸಂಗನಗೌಡ ಅಧ್ಯಕ್ಷತೆ ವಹಿಸಿದ್ದರು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್, ಗೌರಮ್ಮ ಗಿರೀಶ್, ರೇಣುಕಾ ಶ್ರೀನಿವಾಸ್, ದೂಡಾ ಮಾಜಿ ಅಧ್ಯಕ್ಷರಾದ ದೇವರಮನೆ ಶಿವಕುಮಾರ್, ಎ.ವೈ. ಪ್ರಕಾಶ್, ಉಮಾಪ್ರಕಾಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ಮತಿತರರು ಉಪಸ್ಥಿತರಿದ್ದರು.