ಚುನಾವಣೆಯಲ್ಲಿ ಸೋತ ಅಲ್ಲಮಪ್ರಭು ಪಾಟೀಲ್‍ರಿಗೆ ನನ್ನ ರಾಜೀನಾಮೆ ಕೇಳಲು ನೈತಿಕ ಹಕ್ಕಿಲ್ಲ: ರೇವೂರ್

ಕಲಬುರಗಿ.ಡಿ.31:ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಲ್ಲಮಪ್ರಭು ಪಾಟೀಲ್ ಅವರನ್ನು ಮತದಾರರು ತಿರಸ್ಕರಿಸಿ ಸೋಲಿಸಿ ನನಗೆ ಗೆಲ್ಲಿಸಿದ್ದರಿಂದ ನನ್ನ ರಾಜೀನಾಮೆ ಕೇಳುವ ನೈತಿಕ ಹಕ್ಕನ್ನು ಅಲ್ಲಮಪ್ರಭು ಪಾಟೀಲ್ ಅವರು ಕಳೆದುಕೊಂಡಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಹೇಳಿದರು.
ಗುರುವಾರ ಮಂಡಳಿಯ ಕಚೇರಿಯಲ್ಲಿ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಂದ ಸನ್ಮಾನಿಸಿಕೊಂಡು ಮಾತನಾಡಿದ ಅವರು, ಸೋತು ಸುಣ್ಣವಾಗಿರುವ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರಿಗೆ ಮಾಡಲು ಕೆಲಸವಿಲ್ಲ. ಉಂಡ ಮನೆಗೆ ದ್ರೋಹ ಬಗೆದಿರುವ ಅವರು ತಾವು ಪ್ರತಿನಿಧಿಸುತ್ತಿದ್ದ ಸ್ಥಳೀಯ ಸಂಸ್ಥೆಗಳಿಗೂ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‍ಗೆ ಆಯ್ಕೆಯಾಗಿದ್ದ ಅಲ್ಲಮಪ್ರಭು ಪಾಟೀಲ್ ಅವರು ಮತ್ತೆ ಅದೇ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಬಿಜೆಪಿಯ ವಿರುದ್ಧ ಸೋಲನ್ನು ಅನುಭವಿಸಿದರು. ಆ ಕ್ಷೇತ್ರದ ಮತದಾರರೂ ಸಹ ಅವರನ್ನು ತಿರಸ್ಕರಿಸಿದರು. ನಂತರ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸಹ ನನ್ನ ಕ್ಷೇತ್ರದ ಮತದಾರರು ಸಹ ಅಲ್ಲಮಪ್ರಭು ಪಾಟೀಲ್ ಅವರನ್ನು ಸೋಲಿಸಿದರು. ಸೋತರೂ ಸಹ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ಕೊಡದೇ ಉಂಡ ಮನೆಗೆ ದ್ರೋಹ ಬಗೆಯುವ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೂ ಸಹ ದ್ರೋಹ ಬಗೆದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಸ್ಪರ್ಧೆ ಇರುವುದಿಲ್ಲ. ಪಕ್ಷಾತೀತವಾಗಿ ಇರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಶಾಂತಿ, ನೆಮ್ಮದಿ ಇರಬೇಕೆಂಬ ಉದ್ದೇಶದಿಂದ ಅವಿರೋಧ ಆಯ್ಕೆ ಗ್ರಾಮ ಪಂಚಾಯಿತಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ ಐದು ವರ್ಷಗಳ ಅವಧಿಗೆ ಒಂದು ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಘೋಷಿಸಲಾಗಿತ್ತು. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವೂ ಆಗಿರಲಿಲ್ಲ. ಆದಾಗ್ಯೂ, ಸ್ಥಳೀಯ ಸಂಸ್ಥೆಗಳಿಂದ ಪರಿಷತ್‍ಗೆ ಒಮ್ಮೆ ಆಯ್ಕೆಯಾಗಿದ್ದ ಅಲ್ಲಮಪ್ರಭು ಪಾಟೀಲ್ ಅವರು ಅದರ ಉಪಕಾರ ಹಿಡಿದಾದರೂ ನನ್ನ ಘೋಷಣೆಗೆ ಬೆಂಬಲಿಸಬೇಕಿತ್ತು. ಅದನ್ನು ಬಿಟ್ಟು ಅವಿರೋಧ ಆಯ್ಕೆ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚುವರಿ ಅನುದಾನ ನೀಡಿಕೆಯೇ ಒಂದು ಅಪರಾಧ ಎನ್ನುವ ರೀತಿಯಲ್ಲಿ ನನ್ನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಕೊಡಮಾಡಲಾಗುವ ಹೆಚ್ಚುವರಿ ಅನುದಾನಕ್ಕೂ ಕಲ್ಲು ಹಾಕುವ ಮೂಲಕ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಅನ್ಯಾಯ ಮಾಡಿದರು ಎಂದು ಅವರು ತರಾಟೆಗೆ ತೆಗೆದುಕೊಂಡರು.
ನಾನು ಹೆಚ್ಚುವರಿ ಅನುದಾನ ಘೋಷಣೆ ಮಾಡಿದ್ದು ಪಕ್ಷಾತೀತವಾಗಿಯೇ ಹೊರತು ಯಾವುದೇ ಒಂದೇ ಪಕ್ಷಕ್ಕೆ ಎಂದು ಹೇಳಿಲ್ಲ. ಆದಾಗ್ಯೂ, ದೂರು ಸಲ್ಲಿಸಿದ್ದಾರೆ. ಈ ಕುರಿತು ಎಫ್‍ಐಆರ್ ದಾಖಲಾಗಿದೆ. ತನಿಖೆ ನಡೆಯಲಿ. ಅದನ್ನು ಎದುರಿಸುತ್ತೇನೆ. ಈ ಸಂದರ್ಭದಲ್ಲಿ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಪ್ರಕರಣದ ತನಿಖೆಯ ನಂತರವೇ ಎಲ್ಲ ನಿರ್ಧಾರಗಳು ಗೊತ್ತಾಗಲಿದೆ. ತನಿಖೆಯನ್ನು ಎದುರಿಸುತ್ತೇನೆ ಎಂದು ತಿಳಿಸಿದ ಅವರು, ಅವಿರೋಧ ಆಯ್ಕೆಯಾಗಿರುವ ಕಲ್ಯಾಣ ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚುವರಿ ಅನುದಾನ ಕೊಡುವುದಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಹಾಗಾಗಿ ಆ ಕುರಿತು ತನಿಖಾ ಹಂತದಲ್ಲಿ ನಾನು ಪ್ರತಿಕ್ರಿಯಿಸುವುದಿಲ್ಲ. ತನಿಖೆಯಿಂದ ಯಾವ ನಿರ್ಧಾರ ಹೊರಬರುತ್ತದೆಯೋ ಅದನ್ನು ನಾನು ಪಾಲಿಸುತ್ತೇನೆ ಎಂದು ಅವರು ತಿಳಿಸಿದರು.
ಇನ್ನು ಕಲಬುರ್ಗಿ ದಕ್ಷಿಣ ಕ್ಷೇತ್ರದಲ್ಲಿನ ಏಳು ಗ್ರಾಮ ಪಂಚಾಯಿತಿಗಳಲ್ಲಿ ಐದು ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ ಎಂಬ ಅಲ್ಲಮಪ್ರಭು ಪಾಟೀಲ್ ಅವರ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ ಅವರು, ಏಳು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರೇ ಅಧಿಕಾರ ನಡೆಸಲಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಾಗಲೇ ಆ ಕುರಿತು ಬಹಿರಂಗಗೊಳ್ಳಲಿದೆ. ಅಲ್ಲಿಯವರೆಗೆ ಆ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ವಿಕಲಚೇತನ ಕೆರೆ ಭೋಸಗಾ ಗ್ರಾಮ ಪಂಚಾಯಿತಿ ನೂತನ ಸದಸ್ಯ ವಿಠಲ್ ಪೂಜಾರಿ ಹಾಗೂ ಇನ್ನಿತರ ಗ್ರಾಮ ಪಂಚಾಯಿತಿ ನೂತನ ಸದಸ್ಯರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರಿಗೆ ಸನ್ಮಾನಿಸಿದರು.