
ಚಿಕ್ಕಬಳ್ಳಾಪುರ. : ಏ ೨೬.ದಲಿತರು ಯಾರು ಸುಧಾಕರ್‌ಗೆ ಮತ ನೀಡುತ್ತೇವೆ ಎಂದು ಒಪ್ಪಂದ ಹಾಕಿ ಕೊಟ್ಟಿಲ್ಲ, ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹಣ ತಂದಿದೆಷ್ಟು, ತಿಂದಿದೆಷ್ಟು ಎಂಬುದರ ಬಗ್ಗೆ ಮಾಹಿತಿ ನೀಡಲಿ ಎಂದು ಜಿ.ಪಂ ಮಾಜಿ ಸದಸ್ಯ ಕೆ.ಸಿ.ರಾಜಕಾಂತ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ರಾಜಕೀಯ ವ್ಯವಸ್ಥೆ ವ್ಯಾಪಾರೀಕರಣಗೊಂಡಿದೆ. ಇದಕ್ಕೆ ಕಾರಣರಾದ ಸಚಿವ ಸುಧಾಕರ್‌ರವರನ್ನು ತಿರಸ್ಕರಿಸಿ, ಕ್ಷೇತ್ರದ ಜನರು ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡರಿಗೆ ಬೆಂಬಲ ನೀಡಬೇಕು ಮನವಿ ಮಾಡಿದರು.
ಈ ಬಾರಿ ಜನರು ಹಣದ ರಾಜಕೀಯದಿಂದ ದೂರ ಉಳಿದು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡರಿಗೆ ಬೆಂಬಲ ನೀಡಬೇಕು. ಕ್ಷೇತ್ರದಲ್ಲಿ ಸರ್ವಾಧಿಕಾರ ಧೋರಣೆಯನ್ನು ಕೊನೆಗಾಣಿಸಬೇಕು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ಕೋರಿದರು.
ದಲಿತರ ಉದ್ಧಾರಕ್ಕೆ ಸಚಿವ ಸುಧಾಕರ್ ಶ್ರಮಿಸಿದ್ದಾರೆ ಎಂದು ಕೆಲ ದಲಿತ ಮುಖಂಡರು ನೀಡಿರುವ ಹೇಳಿಕೆ ಬೇಸರ ತಂದಿದೆ. ಹಿಂದೆ ಅಂಬೇಡ್ಕರ್ ಜಯಂತಿಯಂದು ಸಚಿವರು ಆಗಮಿಸುವ ತನಕ ಬೇರೆಯನ್ನು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಬಿಡದ ವ್ಯಕ್ತಿಯನ್ನು ಜನಪ್ರತಿನಿಧಯಾಗಿ ಒಪ್ಪಿಕೊಳ್ಳಲು ಸಾಧ್ಯವೆ ಎಂದು ಪ್ರಶ್ನಿಸಿದರು.
ಹತ್ತು ವರ್ಷಗಳಿಂದ ದಲಿತರಿಗೆ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಜಗಜೀವನ್ ರಾಮ್, ಭೋವಿ, ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ದಲಿತರ ವಂಚನೆ ನಡೆದಿದೆ. ಸುಧಾಕರ್ ಶಾಸಕರಾದ ಮೇಲೆ ಸಾಮಾಜಿಕ ಬದಲಾಣೆಗಳು ಮರೀಚಿಕೆಯಾಗಿದೆ. ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಚಳವಳಿಗಳು ನಡೆದಿವೆ. ಇದರ ಪ್ರತಿಫಲವಾಗಿ ಭೂಮಿಯಿಲ್ಲದವರಿಗೆ ಭೂಮಿ, ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೀಟ್ ಪಡೆದುಕೊಳ್ಳಲಾಯಿತು. ಈಗಿನ ಪರಿಸ್ಥಿತಿ ಅವಲೋಕನ ಮಾಡಿದರೆ ಇಪ್ಪತ್ತು ವರ್ಷಗಳ ಹಿಂದಕ್ಕೆ ಹೋಗಿರುವ ಆತಂಕ ಕಾಡುತ್ತಿದೆ ಎಂದು ವಿಷಾದಿಸಿದರು.
ಬಡವರಿಗೆ ವಿತರಿಸುತ್ತಿದ್ದ ವಿದ್ಯಾರ್ಥಿವೇತನ ಯೋಜನೆಯನ್ನು ಸರಕಾರ ರದ್ದುಗೊಳಿಸಿತು. ಗಂಗಾ ಕಲ್ಯಾಣ ಯೋಜನೆಯಡಿ ಕ್ಷೇತ್ರಕ್ಕೆ ಮಂಜೂರಾದ ಅನುದಾನವು ಬಳಕೆಯಾಗಿಲ್ಲ. ಬಡವರಿಗೆ ಅನುಕೂಲ ಮಾಡದಿದ್ದರು ಸಮುದಾಯಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಅಧಿಕಾರದಲ್ಲಿ ಇದ್ದಷ್ಟು ದಿನ ದಲಿತರನ್ನು ಕಡೆಗಣಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.