ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ

ಕೆ.ಆರ್.ಪೇಟೆ:ಮಾ:24: ಮೇ.09 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ನಾನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಕಸಾಪ ಸದಸ್ಯರು ತಮಗೆ ಮತ ಹಾಕುವ ಮೂಲಕ ಜಿಲ್ಲೆಯಲ್ಲಿ ಕನ್ನಡದ ತೇರು ಎಳೆಯಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಕೃಷ್ಣ ಸ್ವರ್ಣಸಂದ್ರ ಮನವಿ ಮಾಡಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ತಾಲೂಕು ಕಸಾಪದ ಪ್ರಮುಖ ಮುಖಂಡರುಗಳ ಮನೆಗಳಿಗೆ ಭೇಟಿ ನೀಡಿ ತಮ್ಮ ಪರ ಬೆಂಬಲ ಯಾಚಿಸಿದ ಕೃಷ್ಣ ಕನ್ನಂಬಾಡಿ ದಿನಪತ್ರಿಕೆಯ ಸಂಪಾದಕನಾಗಿ, ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆಯ ಅಧ್ಯಕ್ಷನಾಗಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷನಾಗಿ ಮತ್ತು ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಇದುವೇ ಭಾರತ, ಧರ್ಮಧ್ವಜ, ಹನಿಕೇಕ್, ಪರ್ವಕಾಲ, ಮರ್ಯಾದಾ ಹತ್ಯೆ, ಬದುಕು ಸಪ್ತಬಣ್ಣ, ವಿಶ್ವರೂಪ, ಗುಡ್ಡೇಬಾಡು, ಪುಣ್ಯಕೋಟಿ ಹಾಗೂ ಆಂಗ್ಲಭಾಷೆಗೆ ಭಾಷಾಂತರಗೊಂಡಿರುವ ಎಥಿಕಲ್ ಫ್ಲಾಗ್ ಎನ್ನುವ ಹತ್ತು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದೇನೆ. ಇದಲ್ಲದೆ ದರಿದ್ರ ಮಾಕ್ರ್ಸ್ ಕಾರ್ಡ್ ಸಾಹಿತ್ಯ, ನೆಲದ ನಗು, ಸುಗ್ಗಿ, ಕಣಜ, ಕಬ್ಬಿನ ಜಲ್ಲೆ, ಮುಂಗಾರು, ಕನ್ನಂಬಾಡಿ ಮುಂತಾದ ಹದಿನಾರು ಕೃತಿಗಳನ್ನು ಸಂಪಾದಿಸಿದ್ದೇನೆ. ಕಳೆದ ಸಾಲಿನಲ್ಲಿ ನಡೆದ ಜಿಲ್ಲಾ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತನಾದರೂ ಬೇಸರಿಸಿಕೊಳ್ಳದೆ ಜೀಶಂಪ ಸಾಹಿತ್ಯ ವೇದಿಕೆಯ ಮೂಲಕ ಸಾವಿರಾರು ಕನ್ನಡಪರ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇನೆ. ಜಿಲ್ಲೆಯ ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಪ್ರೋ.ಜಯಪ್ರಕಾಶಗೌಡ, ಪ್ರೋ.ಎಚ್.ಎಸ್.ಮುದ್ದೇಗೌಡ ಮುಂತಾದವರು ನನ್ನನ್ನು ಬೆಂಬಲಿಸುತ್ತಿದ್ದಾರೆ. ಈಲ್ಲೆಯಲ್ಲಿ ಹೊಸ ಬದಲಾವಣೆಯ ಅಗತ್ಯವಿದೆ. ಹಾಲಿ ಅಧ್ಯಕ್ಷರ ಅವಧಿ 3 ವರ್ಷದಿಂದ 5 ವರ್ಷಕ್ಕೆ ವಿಸ್ತರಿಸಲ್ಪಟ್ಟ ಕಾರಣ ಹಾಲಿ ಅಧ್ಯಕ್ಷ ರವಿಕುಮಾರ್ ಚಾಮಲಾಪುರ 5 ವರ್ಷಗಳ ಕಾಲ ಅಧ್ಯಕ್ಷರ ಹುದ್ದೆಯನ್ನು ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಒಮ್ಮೆ ಅಧ್ಯಕ್ಷರಾದವರು ಮತ್ತೊಮ್ಮೆ ಅಧ್ಯಕ್ಷರಾಗಿ ಸ್ಪರ್ಧಿಸಬಾರದೆನ್ನುವ ಅಲಿಖಿತ ನಿಯಮವನ್ನು ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕøತಿಕ ಚಿಂತಕರು ಜಾರಿಗೆ ತಂದಿದ್ದಾರೆ. ಹೊಸ ಹೊಸ ಪ್ರತಿಭೆಗಳು ಸಾಹಿತ್ಯ ಕ್ಷೇತ್ರದಲ್ಲಿ ಅನಾವರಣಗೊಳ್ಳಬೇಕೆನ್ನುವ ಬಯಕೆಯಿಂದ ನಮ್ಮ ಹಿರಿಯರು ಈ ಅಲಿಖಿತ ನಿಯಮವನ್ನು ರೂಪಿಸಿದ್ದಾರೆ. ಹಿರಿಯರ ನಿಯಮ ಮೀರಿ ಸ್ಪರ್ಧಿಸಿದವರನ್ನು ಜಿಲ್ಲೆಯ ಜಾಗೃತ ಮತದಾರರು ಪರಾಭವಗೊಳಿಸಿ ಹಿರಿಯರ ಅಲಿಖಿತ ನಿಯಮವನ್ನು ಇದುವರೆಗೂ ಬೆಂಬಲಿಸಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ನಾನು ಜಯಗಳಿಸಿದರೆ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕøತಿಕ ಚಿಂತಕರ ಮಾರ್ಗದರ್ಶನದಲ್ಲಿ ಕೆಲಸ ಮಾಡಿ ಪರಿಷತ್ತಿನ ಸದಸ್ಯರಿಗೆ ಗೌರವ ತರುತ್ತೇನೆಯಲ್ಲದೆ ಹಿರಿಯರ ನಿಯಮಗಳನ್ನು ಗೌರವಿಸಿ ನಡೆಯುತ್ತೇನೆಂದ ಕೃಷ್ಣ ಸ್ವರ್ಣಸಂದ್ರ ಜಿಲ್ಲೆಯ ಮತದಾರರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಸಚಿವರ ಭೇಟಿ: ಮತಯಾಚನೆಯ ಸಂದರ್ಭದ ವೇಳೆ ಸಚಿವ ಕೆ.ಸಿ.ನಾರಾಯಣಗೌಡರ ನಿವಾಸಕ್ಕೆ ಆಗಮಿಸಿದ ಕೃಷ್ಣ ಸ್ವರ್ಣಸಂದ್ರ ಸಚಿವರ ಬೆಂಬಲ ಕೋರಿದರು. ಈ ಸಂದರ್ಭದಲ್ಲಿ ಕೃಷ್ಣ ಅವರ ಪರ ಸಕಾರಾತ್ಮಕವಾಗಿ ಮಾತನಾಡಿದ ಸಚಿವರು ಚುನಾಯಿತರಾದವರು ಪಕ್ಷಾತೀತವಾಗಿ ಕೆಲಸ ಮಾಡಿ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿ. ನಿಮಗೆ ಒಳ್ಳೆಯದಾಗಲಿ ಎಂದು ಹರಸಿದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್, ಪಾಂಡವಪುರ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಚಲುವೇಗೌಡ, ತಾಲೂಕು ಕಸಾಪ ಮುಖಂಡರಾದ ಚಾ.ಶಿ.ಜಯಕುಮಾರ್, ಟಿ.ವೈ.ಆನಂದ ಮತ್ತಿತರರಿದ್ದರು.