ಚುನಾವಣೆಯನ್ನು ಹಬ್ಬದಂತೆ ಬರಮಾಡಿಕೊಳ್ಳೋಣ; ಬಿ.ವಾಮದೇವಪ್ಪ

ದಾವಣಗೆರೆ.ಮೇ.೮; ಚುನಾವಣೆಯು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯವಾದ ಪ್ರಕ್ರಿಯೆಯಾಗಿದೆ. ಮೇ ೧೦ ರಂದು ಕರ್ನಾಟಕ ವಿಧಾನ ಸಭೆಗೆ ನಡೆಯುವ ಚುನಾವಣೆಯನ್ನು ಸಂಭ್ರಮ, ಸಡಗರದಿಂದ ಬರಮಾಡಿಕೊಳ್ಳೋಣ ಹಾಗೂ ಹಬ್ಬದ ರೀತಿಯಲ್ಲಿ ಚುನಾವಣೆಯಲ್ಲಿ ಪಾಲ್ಗೊಂಡು ನಮ್ಮ ಮೂಲಭೂತ ಹಕ್ಕನ್ನು ಚಲಾಯಿಸೋಣ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಕರೆ ನೀಡಿದ್ದಾರೆ.ನಾವು ಚುನಾಯಿಸುವ ಜನಪ್ರತಿನಿಧಿಗಳು ನಮ್ಮ ನಾಡು ನುಡಿ, ನೆಲ ಜಲ, ಕಲೆ ಸಂಸ್ಕೃತಿಯ ಸಂರಕ್ಷಣೆ ಹಾಗೂ ಸಂವರ್ಧನೆ ಸೇರಿದಂತೆ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇನ್ನಿತರ ಬಹುಮುಖ್ಯವಾದ ನೀತಿಗಳನ್ನು ರೂಪಿಸುತ್ತಾರೆ‌. ಆದ್ದರಿಂದ ಯೋಗ್ಯ ಜನಪ್ರತಿನಿಧಿಗಳನ್ನು ಆರಿಸುವುದು ನಮ್ಮ ಜವಾಬ್ದಾರಿಯೂ ಆಗಿದೆ. ಈ ನಿಟ್ಟಿನಲ್ಲಿ ಮತದಾನವು ನಮ್ಮ ಮೂಲಭೂತ ಹಕ್ಕು ಮಾತ್ರವೆಂದು ಭಾವಿಸದೇ, ಯಾವುದೇ ಜಾತಿ ಧರ್ಮ ಮತ ಭಾವನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ, ಅಭ್ಯರ್ಥಿಗಳು ನೀಡುವ ಯಾವುದೇ ಆಮಿಷಗಳಿಗೆ ತಲೆ ಬಾಗದೇ ನಿಷ್ಪಕ್ಷಪಾತವಾಗಿ ನಾಡಿನ ಅಭಿವೃದ್ಧಿಯನ್ನೇ ಮಾನದಂಡವಾಗಿರಿಸಿಕೊಂಡು ಮತ ಚಲಾಯಿಸುವುದು ನಮ್ಮ ಜವಾಬ್ದಾರಿಯುತವಾದ ಮತ್ತು ಸಾಂವಿಧಾನಿಕ ಕರ್ತವ್ಯವೆಂದು ಭಾವಿಸಿ ಪ್ರತಿಯೊಬ್ಬ ನಾಗರಿಕನೂ ಕಡ್ಡಾಯವಾಗಿ ಮತ ಚಲಾಯಿಸುವುದರ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.