ಚುನಾವಣೆಯನ್ನು ಯಶಸ್ವಿಯಾಗಿ ಸಂಘಟಿಸಲು ಸಹಕರಿಸಿ

ಧಾರವಾಡ,ಏ24: ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಲ್ಲ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಭಾರತ ಚುನಾವಣಾ ಆಯೋಗದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮತಕ್ಷೇತ್ರದ ಚುನಾವಣೆಯನ್ನು ಯಶಸ್ವಿಯಾಗಿ ಸಂಘಟಿಸಲು ಸಹಕರಿಸಬೇಕು ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಡಿಸಿ ಕಚೇರಿಯ ಚುನಾವಣಾ ಕಾರ್ಯಾಲಯದ ಸಭಾಭವನದಲ್ಲಿ, ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳ ಏಜೆಂಟ್‍ರ ಸಭೆ ಜರುಗಿಸಿ, ಮಾತನಾಡಿದರು.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನಿಯಮಾವಳಿಗಳ ಪುಸ್ತಕ, ಇವಿಎಂ ಬಗ್ಗೆ, ಮತದಾರರ ಪಟ್ಟಿ ಮತ್ತು ಚುನಾವಣೆಯಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಕೈಪಿಡಿಗಳನ್ನು ನೀಡಲಾಗಿದೆ. ಅದನ್ನು ಓದಿ ತಿಳಿದುಕೊಳ್ಳಬೇಕು. ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತರಬೇತಿ ಮೂಲಕ ಮತ್ತು ಎಲ್ಲ ಜನರಿಗೆ ಸುದ್ದಿ ಮಾಧ್ಯಮಗಳ ಮೂಲಕ ಅಗತ್ಯ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ. ತಮಗೆ ಯಾವುದೇ ಗೊಂದಲ ಅಥವಾ ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ಚುನಾವಣಾ ಸಹಾಯವಾಣಿ 1950 ಕ್ಕೆ ಕರೆ ಮಾಡಿ ಅಥವಾ ಆಯಾ ವಿಧಾನಸಭಾ ಮತಕ್ಷೇತ್ರದಲ್ಲಿರುವ ಸಹಾಯಕ ಚುನಾವಣಾ ಅಧಿಕಾರಿಗಳನ್ನು ಭೇಟಿ ಆಗಿ, ಪಡೆಯಬಹುದು ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರತಿ ಅಭ್ಯರ್ಥಿಗೆ ರೂ. 95 ಲಕ್ಷಗಳವರೆಗೆ ಖರ್ಚು ಮಾಡುವ ಅವಕಾಶವಿರುತ್ತದೆ. ವಾಹನ, ಪ್ರಚಾರ ಸಾಮಗ್ರಿ, ವೇದಿಕೆ ಸಾಮಗ್ರಿ, ಧ್ವನಿವರ್ಧಕ ಹೀಗೆ ಪ್ರತಿಯೊಂದರ ದರವನ್ನು ಆಯೋಗದ ಮಾರ್ಗಸೂಚಿಗಳ ಪ್ರಕಾರ ನಿಗದಿಪಡಿಸಿ ಗೆಜೆಟ್ ಹೊರಡಿಸಲಾಗಿರುತ್ತದೆ. ಅದರಂತೆ ಎಲ್ಲರೂ ಖರ್ಚು ವೆಚ್ಚದ ವರದಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಮನೆಯಿಂದ ಮತದಾನಕ್ಕಾಗಿ ಈಗಾಗಲೇ ನೋಂದಾಯಿತರಾಗಿರುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಶೇ. 40 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವೀಕಲಚೇತನರಿಗೆ ಏಪ್ರಿಲ್ 25 ಮತ್ತು 26 ರಂದು ಮನೆಯಿಂದ ಮತದಾನ ಮಾಡಲು ಅವಕಾಶ ಮಾಡಲಾಗುತ್ತಿದೆ. ಇದಕ್ಕೆ ಬೇಕಿರುವ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ, ಇವತ್ತಿನಿಂದ ಮನೆಮನೆಗೆ ಮತದಾರರ ವೋಟರ್ ಸ್ಲಿಪ್ ವಿತರಣೆ ಕಾರ್ಯ ಆರಂಭವಾಗಿದೆ. ಇದರೊಂದಿಗೆ ವೋಟರ್ ಗೈಡ್ ಮತ್ತು ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕ, ಯುವತಿಯರಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಪ್ರಶಂಸನಾ ಪತ್ರ ನೀಡಲಾಗುತ್ತಿದೆ. ಪೂರಕ ಮತದಾರರ ಪಟ್ಟಿ ಬಂದಿದ್ದು, ವಿತರಿಸಲಾಗಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಮೇ 1,2 ಮತ್ತು 3 ರಂದು ಪೆÇಸ್ಟಲ್ ವೋಟರ್ ಸೆಂಟರ್ ತೆರೆಯಲಾಗುತ್ತದೆ. ಅಂದು ನಮ್ಮ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆದರೆ ಬೇರೆ ಜಿಲ್ಲೆಯಲ್ಲಿ ಮತದಾರರಾಗಿರುವ ಸೇವಾ ಸಿಬ್ಬಂದಿಗಳು ತಮ್ಮ ಮತ ಚಲಾಯಿಸಲು ಅವಕಾಶ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆಗಿರುವ ಸಿದ್ದು ಹುಲ್ಲೋಳಿ ಅವರು ಪ್ರಾತ್ಯಕ್ಷಿಕೆ ಮೂಲಕ ಚುನಾವಣಾ ನಿಯಮಗಳು ಹಾಗೂ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳನ್ನು ವಿವರಿಸಿದರು.

ವೆಚ್ಚ ನೊಡಲ್ ಅಧಿಕಾರಿ ವಿಶ್ವನಾಥ ಅವರು ಅಭ್ಯರ್ಥಿಗಳ ಖರ್ಚು, ವೆಚ್ಚ, ನಿರ್ವಹಿಸುವ ವಹಿಗಳು, ದಾಖಲೆಗಳು, ವೆಚ್ಚ ವಿವರದ ನಮೂನೆಗಳ ಕುರಿತು ಅಭ್ಯರ್ಥಿಗಳಿಗೆ ವಿವರಿಸಿದರು.

ಸಭೆಯಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರಾದ ಅಜಯ ಗುಪ್ತಾ, ಪೆÇಲೀಸ ವೀಕ್ಷಕರಾದ ಭನ್ವರ ಲಾಲ ಮೀನಾ, ವೆಚ್ಚ ವೀಕ್ಷಕರಾದ ಭೂಷಣ ಪಾಟೀಲ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೆÇಲೀಸ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಉಪ ಪೆÇಲೀಸ ಆಯುಕ್ತ ರಾಜೀವ ಎಂ., ಮಾದರಿ ನೀತಿ ಸಂಹಿತೆ ಜಿಲ್ಲಾ ನೊಡಲ್ ಅಧಿಕಾರಿ ಮೋನಾ ರೋತ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸೇರಿದಂತೆ ವಿವಿಧ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜಂಟರು ಭಾಗವಹಿಸಿ, ಮಾಹಿತಿ ಪಡೆದುಕೊಂಡರು.
(ಫೋಟೊ ಇವೆ)