ಚುನಾವಣೆಗೆ ಸ್ಪರ್ಧಿಸಲು ಸಮಾಜಸೇವೆ ಮಾನದಂಡ ಅಗತ್ಯ

ಕೋಲಾರ,ಮೇ.೯:ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಯಾ ಚುನಾವಣಾ ಕ್ಷೇತ್ರದಲ್ಲಿ ಕನಿಷ್ಠ ಪಕ್ಷ ಆರು ತಿಂಗಳು ಕಾಲ ಸಮಾಜಸೇವೆಯಲ್ಲಿ ತೊಡಗಿರಬೇಕು ಎಂಬ ಅರ್ಹತಾ ಮಾನದಂಡವನ್ನು ಜನಪ್ರಾತಿನಿಧ್ಯಾ ಅಧಿನಿಯಮದಲ್ಲಿ ಅಳವಡಿಸುವಂತೆ ಆಲ್ ಇಂಡಿಯಾ ಅಡ್ವೊಕೇಟ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಹಾಗೂ ಖ್ಯಾತ ವಕೀಲ ಕೆ.ನರೇಂದ್ರಬಾಬು ಆಗ್ರಹಿಸಿದ್ದಾರೆ.
ಕಳೆದ ಒಂದು ದಶಕ ಕಾಲದಿಂದ ವಲಸೆ ಅಭ್ಯರ್ಥಿಗಳು ಚುನಾವಣಾ ಕ್ಷೇತ್ರಕ್ಕೆ ಬಂದು ಸ್ಪರ್ಧಿಸುವುದು ತೀರಾ ಹೆಚ್ಚಾಗಿ ಕಂಡುಬರುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಗಳು ಅಲ್ಲಿಯೇ ಸ್ಥಿರವಾಗಿ ನೆಲೆಸುವುದು, ಇಲ್ಲವೇ ಪರಾಜಿತರಾದ ಕೂಡಲೇ ಸದರಿ ಚುನಾವಣಾ ಕ್ಷೇತ್ರದಿಂದಲೇ ಅಂತರ್ಧಾನರಾಗುತ್ತಿರುವುದೂ ಸಾಮಾನ್ಯವಾಗುತ್ತಿದೆ.
ವಲಸೆ ಅಭ್ಯರ್ಥಿ ಹಣದ ಥೈಲಿಯೊಡನೆ ಆಯಾ ಚುನಾವಣಾ ಕ್ಷೇತ್ರಕ್ಕೆ ಅಡಿಯಿಡುತ್ತಿದ್ದಂತೆಯೇ ಕೆಲವೇ ಕ್ಷಣಾರ್ಧದಲ್ಲಿ ಅವರಿಗೊಂದು ಅಭಿಮಾನಿಗಳ ಸಂಘ ಅನೋಂದಾಯಿತವಾಗಿ ಚಾಲನೆಗೆ ಬರುವುದು, ಅಭ್ಯರ್ಥಿಯ ವಾಹನದ ಹಿಂದೆಯೇ ಹತ್ತಾರು ವಾಹನಗಳು ಸಾಲುಗಟ್ಟುವುದು ಸಾಧಾರಣವಾಗಿ ಕಂಡುಬರುವ ದೃಶ್ಯವಾಗಿದೆ. ಶಾಲೆ, ದೇವಸ್ಥಾನಗಳಲ್ಲಿ ಸೃಜಿಸಿದ ಕಾರ್ಯಕ್ರಮಗಳಿಗೆ ಬಂದು ಐದ್ಹತ್ತು ಸಾವಿರ ರೂಪಾಯಿ ಕೊಡುಗೆಕೊಟ್ಟು ಹೋದ ಕೂಡಲೇ ಅವರ ವೀರಭಾಷಣಗಳನ್ನು ತಾವೇ ಸೃಜಿಸಿ ಪ್ರಕಟಿಸುವ ಪರ ಮಾಧ್ಯಮಗಳೂ ತತ್‌ಕ್ಷಣಕ್ಕೆ ಅಸ್ಥಿತ್ವಕ್ಕೆ ಬರುತ್ತಿವೆ. ಇವುಗಳಲ್ಲಿ ಯೂ ಟ್ಯೂಬ್ ದೃಶ್ಯಾವಳಿಗಳ ಕೊಡುಗೆ ಪ್ರಮಾಣ ಅಪಾರ!ಮತ್ತೆ ಬರುವ ಚುನಾವಣೆಗೆ ಪರಾಜಿತ ಅಭ್ಯರ್ಥಿ ಸಾಕಷ್ಟು ಬಾರಿ ನಾಪತ್ತೆಯಾಗಿರುತ್ತಾರೆ! ಅವನ ಜಾಗದಲ್ಲಿ ಇನ್ನೊಬ್ಬ ವಲಸೆ ಅಭ್ಯರ್ಥಿ ನಿಂತಿರುತ್ತಾರೆ, ಮತ್ತೆ ಅವರ ಹಿಂದೆ ಅಭಿಮಾನಿಗಳ ಬಳಗ, ವಾಹನಗಳ ಸಾಲು, ಜೈಕಾರ-ಹೂಹಾರ ಖಂಡಿತಾ ತಪ್ಪದೇ ಪ್ರತ್ಯಕ್ಷವಾಗಿರುತ್ತದೆ! ಗ್ರಾಮಾಂತರ ಮುಗ್ಧ ಮತದಾರ ಮತ್ತೆ ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತಿರುತ್ತಾನೆ! ಅವನನ್ನು ಯಾಮಾರಿಸಿ ಮತ ಕಸಿಯಲಾಗುತ್ತದೆ! ಹೋದರೆ ಸೈನ್ಯ-ಬಂದರೆ ರಾಜ್ಯ ಎಂಬ ಫಾರ್ಮುಲಾ ಒಮ್ಮೊಮ್ಮೆ ವರ್ಕ್ ಆಗಿಬಿಡುತ್ತದೆ!
ಚುನಾವಣೆಗಳು ಅಭ್ಯರ್ಥಿಗಳು ಸ್ಪರ್ಧಿಸಲು ನಡೆಯುತ್ತಿಲ್ಲ, ಆಯಾ ಚುನಾವಣಾ ಕ್ಷೇತ್ರದ ಸಮಸ್ಯೆ-ಬೇಡಿಕೆಗಳ ಸುನಾವಣೆಗೆ-ಪರಿಹಾರಕ್ಕಾಗಿ ನಡೆಯುತ್ತವೆ. ಇದೇ ಚುನಾವಣೆಯ ಧ್ಯೇಯೋದ್ಧೇಶವಾಗಿರುತ್ತದೆ. ಆದ್ದರಿಂದ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯು ಕನಿಷ್ಠ ಪಕ್ಷ ಆರು ತಿಂಗಳು ಕಾಲ ಆಯಾ ಚುನಾವಣಾ ಕ್ಷೇತ್ರದಲ್ಲಿ ಸಮಾಜಸೇವೆಗೈದಿರಬೇಕು ಎಂಬ ತಿದ್ದುಪಡಿಯನ್ನು ಜನಪ್ರಾತಿನಿಧ್ಯ ಅಧಿನಿಯಮದಲ್ಲಿ ಅಗತ್ಯವಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.