ಚುನಾವಣೆಗೆ ಸಜ್ಜಾಗುವ ರೀತಿ ಲಸಿಕೆ ಶೀಘ್ರ ಪೂರೈಕೆಗೆ ಸಿದ್ದರಾಗಿ- ಪ್ರಧಾನಿ

ನವದೆಹಲಿ, ಅ.17- ಚುನಾವಣೆಗಳು ನಡೆಯುವಾಗ ಅದರ ಸಿದ್ಧತೆಗೆ ಹೇಗೆ ತಯಾರಿ ಮಾಡಿಕೊಳ್ಳುತ್ತೀರೋ ಅದೇ ರೀತಿ ಕೊರಾನೋ ಲಸಿಕೆ ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ನೀತಿ ಆಯೋಗದ ಅಧಿಕಾರಿಗಳು ಲಸಿಕೆಯನ್ನು ತಲುಪಿಸುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಕೋವಿಡ್ ಲಸಿಕೆ ಪೂರ್ವಸಿದ್ಧತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಚುನಾವಣೆ ನಡೆಯುವಾಗ ಜಿಲ್ಲಾಡಳಿತ ರಾಜ್ಯಗಳು ಮಾಹಿತಿ ತಂತ್ರಜ್ಞಾನ ಇಲಾಖೆ ಚುರುಕಾಗಿ ಕೆಲಸ ಮಾಡುತ್ತವೆಯೋ ಅದೇ ರೀತಿ ಲಸಿಕೆ ಸಿದ್ಧವಾದ ಬಳಿಕ ಅದರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಇದಕ್ಕಾಗಿ ಎಲ್ಲೆಲ್ಲಿ ಲಸಿಕೆಯನ್ನು ಸಂಗ್ರಹಿಸಿಡಬೇಕು ಸರಬರಾಜು ಹೇಗೆ ಮಾಡಬೇಕು ಎನ್ನುವ ಕುರಿತು ಈಗಲೇ ಖಾತ್ರಿಪಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.

ಕೋರೋನಾ ಲಸಿಕೆ ಸಿದ್ಧವಾಗುತ್ತಿದ್ದಂತೆ ಅದನ್ನ ಶೀಘ್ರಗತಿಯಲ್ಲಿ ದೇಶದ ಎಲ್ಲ ಜನರಿಗೂ ಅದರಲ್ಲೂ ಅಗತ್ಯವಿರುವ ಜನರಿಗೆ ಪೂರೈಕೆ ಮಾಡಲು ಹೀಗಿಂದೀಗಲೇ ಸಿದ್ದರಾಗಿ.. ಯಾವುದೇ ಕಾರಣಕ್ಕೂ ತಡಮಾಡಬೇಡಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಸೂಚಿಸಿದ್ದಾರೆ.

ಲಸಿಕೆಯನ್ನು ಎಲ್ಲಿ ಇಡುವುದು ಅದರ ಸುರಕ್ಷತೆ ಪೂರೈಕೆ ಸರಬರಾಜು ಸೇರಿದಂತೆ ಇನ್ನಿತರೆ ವಿಷಯಗಳನ್ನು ಈಗಲೇ ಗಮನಿಸಿ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಿ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ತಿಳಿಸಿದ್ದಾರೆ.

ವಿದೇಶಕ್ಕೂ ಪೂರೈಕೆ:

ದೇಶದಲ್ಲಿ ಮಾತ್ರವಲ್ಲ ವಿದೇಶಕ್ಕೂ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳಿ ಇದೊಂದು ಜಾಗತಿಕ ಸೇವೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ದೇಶದಲ್ಲಿ ಕೊರೋನೋ ಸೋಂಕಿಗೆ ತಯಾರಾಗುತ್ತಿರುವ ಲಸಿಕೆಗಳ ಪೈಕಿ ಎರಡು ಲಕ್ಷಣಗಳು ಎರಡನೇ ಹಂತದಲ್ಲಿ ಮತ್ತೊಂದು ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ಮೂರನೇ ಅಂತದೆ ಪ್ರಯೋಗದಲ್ಲಿರುವ ಲಸಿಕೆ ಯಾವುದೇ ಕ್ಷಣದಲ್ಲಿ ಲಭ್ಯವಾಗಬಹುದು ಅದರ ಪೂರೈಕೆಗೆ ಸಜ್ಜಾಗಿದ್ದಾರೆ.

ಕೊರೋನಾ ಸೋಂಕಿನ ಸಮಯದಲ್ಲಿ ಜಾಗತಿಕ ಸೇವೆ ಮಾಡುವ ಅವಕಾಶ ಭಾರತದ ಪಾಲಿಗೆ ಸಿಕ್ಕಿದೆ ಈಗಾಗಲೇ ಔಷಧಿಗಳನ್ನು ಜಗತ್ತಿನ ವಿವಿಧ ದೇಶಗಳಿಗೆ ಸರಬರಾಜು ಮಾಡಲಾಗಿದೆ ಅದೇ ರೀತಿ ಕೊರೋನಾ ಲಸಿಕೆ ಸರಬರಾಜು ಮಾಡುವ ಅವಕಾಶ ಭಾರತದ ಪಾಲಾಗಲಿದೆ ಎಂದು ಹೇಳಿದರು.