ಚುನಾವಣೆಗೆ ವ್ಯಾಪಕ ಬಂದೋಬಸ್ತ್

ಬೆಂಗಳೂರು, ಮೇ.೮-ರಾಜ್ಯ ವಿಧಾನಸಭೆ ಚುನಾವಣೆಗೆ ನಾಡಿದ್ದು (ಮೇ.೧೦) ಮತದಾನ ನಡೆಯಲಿದೆ. ಈ ಹಿನ್ನೆಲೆ ೧ ಲಕ್ಷದ ೫೬ ಸಾವಿರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಅಭೂತಪೂರ್ವ ಬಂದೋಬಸ್ತ್ ಕೈಗೊಳ್ಳಲಾಗಿದೆ.
ವಿಧಾನಸಭೆ ಚುನಾವಣೆ ಮತದಾನಕ್ಕೆ ೫೫ ಸಾವಿರದ ೨೮೨ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅದರಲ್ಲಿ ೧೧ ಸಾವಿರದ ೬೧೭ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅವುಗಳಿಗೆ ಪೊಲೀಸ್ ಸಿಬ್ಬಂದಿಯ ಜೊತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಕಂಪನಿಗಳನ್ನು ನಿಯೋಜಿಸಲಾಗಿದೆ.
ರಾಜ್ಯದ ಕಮಿಷನರ್ ರೇಟ್‌ಗಳಲ್ಲಿ ಕಮಿಷನ್‌ರ್‌ಗಳು, ಜಿಲ್ಲೆಗಳಲ್ಲಿ ಎಸ್‌ಪಿಗಳು ಚುನಾವಣಾ ನಿಗಾ ವಹಿಸಲಿದ್ದಾರೆ. ಚುನಾವಣಾ ಭದ್ರತೆಗೆ ೩೦೪ ಡಿಎಸ್‌ಪಿಗಳು, ೯೯೧ ಇನ್ಸ್‌ಪೆಕ್ಟರ್‌ಗಳು, ೨೬೧೦ ಮಂದಿ ಸಬ್ ಇನ್ಸ್‌ಪೆಕ್ಟರ್‌ಗಳು, ೫೮೦೩ ಎಎಸ್‌ಐಗಳು ೪೬,೪೨೧ ಮುಖ್ಯ ಪೇದೆಗಳು, ೨೭,೯೯೦ ಮಂದಿ ಹೋಮ್ ಗಾರ್ಡ್‌ಗಳು ಸೇರಿದಂತೆ ೮೪,೧೧೯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ್ತು ಅವಶ್ಯಕತೆಗೆ ಅನುಗುಣವಾಗಿ ಅಧಿಕಾರಿಗಳ ಸಿಬ್ಬಂದಿಗಳ ಕೊರತೆಯನ್ನು ಸರಿದೂಗಿಸಲು ಹೊರ ರಾಜ್ಯದಿಂದ ೮,೫೦೦ ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಗೃಹ ಚುನಾವಣಾ ಕರ್ತವ್ಯಕ್ಕೆ ಪಡೆಯಲಾಗಿದೆ.
ಇದರ ಜೊತೆಗೆ ೬೫೦ ಸಿಎಪಿಎಫ್ ಕಂಪನಿಗಳು ರಾಜ್ಯ ಶಸ್ತ್ರಾ ಮಿಸಲು ಪಡೆಯನ್ನು ನಿಯೋಜಿಸಲಾಗಿದೆ. ಚುನಾವಣೆಗೆ ೨೯೩೦ ಸೆಕ್ಟರ್ ಮೊಬೈಲ್‌ಗಳು ಕಾರ್ಯಾಚಾರಣೆಯಲ್ಲಿದ್ದು, ಒಂದೊಂದು ಸೆಕ್ಟರ್‌ಗೆ ೨೦ ಬೂತ್‌ಗಳನ್ನು ನಿಗದಿ ಪಡಿಸಲಾಗಿದೆ. ಪಿಎಸ್‌ಐ ಎಎಸ್‌ಐ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿರಂತರ ಗಸ್ತುಗೆ ಮೀಸಲಿರಿಸಲಾಗಿದೆ.
ಸೆಕ್ಟರ್ ಮೊಬೈಲ್‌ಗಳ ಮೆಲ್ವಿಚಾರಣೆಗೆ ೭೪೯ ಮೇಲ್ವಿಚಾರಣಾ ಮೊಬೈಲ್‌ಗಳಿದ್ದು, ಅವುಗಳ ಉಸ್ತುವಾರಿಗೆ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್, ೪ ಸೆಕ್ಟರ್ ಮೊಬೈಲ್ ಮೇಲ್ವಿಚಾರಣೆಗೆ ಓರ್ವ ಡಿವೈಎಸ್‌ಪಿ ನೇಮಿಸಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ೭೦೦ಕ್ಕೂ ಹೆಚ್ಚು ವಿಚಕ್ಷಣಾ ದಳಗಳನ್ನು ನೇಮಿಸಿ ಸೂಕ್ಮ ಪ್ರದೇಶಗಳನ್ನು ಒಳಗೊಂಡತೆ ಅಂತರ್‌ರಾಜ್ಯ, ಅಂತರ್ ಗಡಿ ಭಾಗಗಳಲ್ಲಿ ೭೦೦ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ೫೫೦೦ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ೩೦ ಸಾವಿರದ ೪೧೮ ಭದ್ರತಾ ಪ್ರಕರಣಗಳನ್ನು ದಾಖಲಿಸಿ ಅವುಗಳಲ್ಲಿ ಸನ್ನಡೆಯ ಆಧಾರದ ಮೇಲೆ ೩೩ ಸಾವಿರದ ೪೦೬ ವ್ಯಕ್ತಿಗಳನ್ನು ಬಾಂಡ್ ಒವರ್ ಮಾಡಲಾಗಿದೆ. ಚುನಾವಣೆ ವೇಳೆ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ೭೧೪ ವ್ಯಕ್ತಿಗಳ ವಿರುದ್ಧ ಗಡಿಪಾರು ಕಾಯಿದೆ ಅಡಿ ಕ್ರಮ ಕೈಗೊಂಡು ೩೮ ಹ್ಯವಾಸಿ ಅಪರಾಧಿಗಳ ವಿರುದ್ಧ ಗೂಂಡಾ ಕಾಯಿದೆ ಜಾರಿಗೊಳಿಸಲಾಗಿದೆ.
ಚುನಾವಣಾ ಕರ್ತವ್ಯಕ್ಕೆ ನೇಮಿಸಲಾದ ೬೫೦ ಪಿಎಪಿಎಫ್ ಕಂಪನಿಗಳಲ್ಲಿ ೧೦೧ ಸಿಆರ್‌ಪಿಎಫ್, ೧೦೮ ಬಿಎಸ್‌ಎಫ್, ೭೫ ಸಿಐಎಸ್‌ಎಫ್, ೭೦ ಐಟಿಬಿಪಿ, ೭೫ ಎಸ್‌ಎಸ್‌ಬಿ, ೩೫ ಆರ್‌ಪಿಎಫ್ ಹಾಗೂ ೧೯೬ ಎಸ್‌ಎಪಿ ಕಂಪನಿಗಳಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.