ಚುನಾವಣೆಗೆ ರಣತಂತ್ರ ನ. 7-ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ

ನವದೆಹಲಿ,ನ.೩- ವಿವಿಧ ರಾಜ್ಯಗಳ ಉಪಚುನಾವಣೆಗಳ ಫಲಿತಾಂಶದ ಬೆನ್ನಲ್ಲೆ ಮುಂದಿನ ೫ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕಾರ್ಯತಂತ್ರಗಳ ರೂಪು-ರೇಷೆ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲು ಇದೇ ತಿಂಗಳ ೭ ರಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಾವೇಶಗೊಳ್ಳಲಿದೆ.
ವಿವಿಧ ರಾಜ್ಯಗಳ ಉಪಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ ಬಳಿಕ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಕೆಲ ಮಹತ್ವದ ತೀರ್ಮಾನಗಳು ಆಗಲಿವೆ. ಮುಂಬರುವ ೫ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆಯಾದರೂ ಉಪಚುನಾವಣೆಯ ಫಲಿತಾಂಶ ಸೇರಿದಂತೆ ಪಕ್ಷದ ಹಲವು ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.
ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆ ೨೦೧೯ರ ಲೋಕಸಭಾ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ನ. ೭ ರಂದು ದೆಹಲಿಯಲ್ಲಿ ಈ ಕಾರ್ಯಕಾರಿಣಿ ಸಭೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ನೇತೃತ್ವದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಬಿಜೆಪಿಯ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರುಗಳು ಹಾಗೂ ಪ್ರಮುಖ ಮುಖಂಡರುಗಳು, ಆಹ್ವಾನಿತ ನಾಯಕರುಗಳು ಪಾಲ್ಗೊಳ್ಳುತ್ತಾರೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್ ತಿಳಿಸಿದ್ದಾರೆ.
ಈ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರುಗಳಿಗೂ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ದೆಹಲಿಯ ಎನ್‌ಡಿಎಂಸಿ ಸಭಾಂಗಣದಲ್ಲಿ ಈ ಕಾರ್ಯಕಾರಿಣಿ ನ. ೭ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಈ ಕಾರ್ಯಕಾರಿಣಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಉದ್ಘಾಟನಾ ಭಾಷಣದೊಂದಿಗೆ ಆರಂಭವಾಗಲಿದ್ದು, ಸಂಜೆ ಪ್ರಧಾನಿ ನರೇಂದ್ರಮೋದಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅರುಣ್‌ಸಿಂಗ್ ಹೇಳಿದರು.
ಈ ಸಭೆಯ ಕಾರ್ಯಸೂಚಿಗಳ ಬಗ್ಗೆ ಮಾಹಿತಿ ನೀಡಿದ ಅವರು, ಅಧ್ಯಕ್ಷರ ಭಾಷಣ, ಸಂತಾಪ ಸೂಚಕ ನಿರ್ಣಯ, ವಿಧಾನಸಭಾ ಚುನಾವಣೆಗಳ ಚರ್ಚೆ ಜತೆಗೆ ಇತರೆ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.


ದೆಹಲಿಯಲ್ಲಿ ಭಾನುವಾರ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ತಿಂಗಳ ೬ ರಂದು ನವದೆಹಲಿಗೆ ತೆರಳುವರು.
ಹುಬ್ಬಳ್ಳಿಯ ಪ್ರವಾಸ ಮುಗಿಸಿ ಶುಕ್ರವಾರ ಬೆಂಗಳೂರಿಗೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶನಿವಾರ ದೆಹಲಿಗೆ ತೆರಳಿ ಭಾನುವಾರ ನಡೆಯುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಸೋಮವಾರ ಬೆಂಗಳೂರಿಗೆ ವಾಪಸ್ಸಾಗುವರು.