ಚುನಾವಣೆಗೆ ಮತ್ತೆ ಸ್ಪರ್ಧೆ: ಹೊರಟ್ಟಿ

ಹುಬ್ಬಳ್ಳಿ, ಜ೭- ಪರಿಷತ್ ಸಭಾಪತಿ ಆಯ್ಕೆಯನ್ನು ಜೆಡಿಎಸ್ ಅವರನ್ನು ಬಿಟ್ಟು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾನು ಸಭಾಪತಿಯಾಗುವುದಕ್ಕೆ ಶೇ. ೯೦ ರಷ್ಟು ಸದಸ್ಯರ ಸಹಮತವಿದ್ದು, ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಭಾಪತಿ ಆಗುವುದಕ್ಕೆ ಮೂರು ಪಕ್ಷಗಳಿಂದ ಸಹಮತವಿದ್ದು ನಾನು ಹಿರಿಯ ಸದಸ್ಯ ಎನ್ನುವ ಕಾರಣಕ್ಕೆ ಅವಿರೋಧ ಆಯ್ಕೆಗೆ ಮೂರು ಪಕ್ಷದವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ಅವರು, ಪರಿಷತ್ ಸಭಾಪತಿಯನ್ನು ಕೆಳಗಿಳಿಸುವಾಗ ಬಿಜೆಪಿ ಜೊತೆಗೆ ಹೊಂದಾಣಿಕೆಯಾಗಿತ್ತು ಎಂದರು.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಎಂಬುವುದು ಕೇವಲ ಗಾಳಿ ಸುದ್ದಿ ಅಷ್ಟೆ ಎಂದು ಸ್ಪಷ್ಟಪಡಿಸಿದರು.