ಚುನಾವಣೆಗೆ ಖಂಡಿತ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ ರವಿಸ್ವಾಮಿ

ಔರಾದ:ಎ.11: ಮೊದಲಿನಿಂದಲೂ ನನ್ನ ಹತ್ತಿರ ಬೇಡಜಂಗಮ ಪ್ರಮಾಣ ಪತ್ರವಿದೆ. ಆದರೆ ಚುನಾವಣೆ ಸಂದರ್ಭದಲ್ಲಿಯೇ ನನ್ನ ಪ್ರಮಾಣ ಪತ್ರ ರದ್ದುಗೊಳಿಸಿರುವುದರ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಶಾಸಕರು ತಮ್ಮ ಸೋಲಿನ ಭಯದಿಂದ ಈ ರೀತಿ ಮಾತನಾಡುತ್ತಿರುವುದು ಅವರ ಹತಾಶ ಭಾವನೆಗೆ ಸಾಕ್ಷಿಯಾಗಿದೆ. ಈಗಾಗಲೇ ಬಹುತೇಕ ತಾಲೂಕಿನಾದ್ಯಂತ ಜನರು ಶಾಸಕರ ಸರ್ವಾಧಿಕಾರಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ತಮ್ಮ ಜಾತಿ ಜನಾಂಗದವರಿಗೆ ಮಾತ್ರ ನೋಡುತ್ತಿದ್ದಾರೆ. ನಮ್ಮ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಜನತಾ ಜನಾರ್ಧನರು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಬಾರಿ ನನಗೆ ಒಂದು ಅವಕಾಶ ನೀಡಬೇಕೆಂದು ರವೀಂದ್ರ ಸ್ವಾಮಿ ತಿಳಿಸಿದರು.

ತಾಲೂಕಿನ ಹುಲಸೂರ ಕೆ ಮತ್ತು ಕಂದಗೂಳ ಗ್ರಾಮದಲ್ಲಿ ನಡೆಯುತ್ತಿರುವ ಅಖಂಡ ಹರಿನಾಮ ಸಪ್ತಾಹ ಮತ್ತ ಕೀರ್ತನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ತಾಲೂಕಿನಾದ್ಯಂತ ರಸ್ತೆ, ಕುಡಿಯುವ ನೀರು, ಜಲಜೀವನ ಮಿಷನ್ ಅಡಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿರುವ ಸಮಸ್ಯೆ, ವಸತಿ ಇಲ್ಲದೆ ಒದ್ದಾಡುವ ಜನರು, ಯುವಕರಿಗೆ ನಿರುದ್ಯೋಗ ಸಮಸ್ಯೆ, ಹೊಸ ಕಂಪನಿಗಳು ತಾಲೂಕಿಗೆ ತರದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನರು ಎಚ್ಚೆತ್ತುಕೊಂಡಿದ್ದಾರೆ. ಈ ಬಾರಿ ಬದಲಾವಣೆ ಕಡೆಗೆ ಮುಖಮಾಡಿದ್ದಾರೆ. ಚವ್ಹಾಣಮುಕ್ತ ಔರಾದ ಕ್ಷೇತ್ರ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಪಣ ತೊಟ್ಟಿದ್ದಾರೆ ಎಂದು ರವೀಂದ್ರ ಸ್ವಾಮಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಮುಖರಾದ ಸಂದೀಪ ಮಹಾರಾಜ ತೇಲಗಾಂವ, ನಾಗನಾಥ ಮಹಾರಾಜ ಹಂಗರಗಾ, ಉತ್ತಮ ಮಹಾರಾಜ ಬಾದಲಗಾಂವ, ಸಂತೋಷ ಮಹಾರಾಜ, ಓಂ ಪಾಟೀಲ, ರಾಜಕುಮಾರ ಬಿರಾದಾರ, ಆತ್ಮಾರಾಮ ಬಿರಾದಾರ, ಪ್ರಭಾಕರ್ ಬಿರಾದಾರ ಮತ್ತು ಖಂಡು ಡಾವರಗಾಂವೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊನೆಗೆ ಗ್ರಾಮಗಳ ತುಂಬೆಲ್ಲಾ ಪಾದಯಾತ್ರೆ ನಡೆಸಿದ ಶ್ರೀ ರವೀಂದ್ರ ಸ್ವಾಮಿ ಭರ್ಜರಿ ಪ್ರಚಾರ ನಡೆಸಿದರು. ಸಾವಿರಾರು ಜನರು ಸ್ವಾಮಿಯವರಿಗೆ ಸಾಥ್ ನೀಡಿ ಅಭಯಹಸ್ತ ನೀಡಿದರು.