ಬೆಳಗಾವಿ,ಜ.೧೧:ಮುಂದಿನ ಚುನಾವಣೆಯಲ್ಲಿ ವಿಜಯದ ಸಂಕಲ್ಪದೊಂದಿಗೆ ರಾಜಕೀಯ ಪಕ್ಷಗಳ ಯಾತ್ರೆ ಪರ್ವ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷ ’ಪ್ರಜಾಧ್ವನಿ’ ಹೆಸರಿನ ಬಸ್ ಯಾತ್ರೆಯ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದೆ.ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ಸಂಕಲ್ಪದೊಂದಿಗೆ ಕಾಂಗ್ರೆಸ್ ನಾಯಕರು ಈ ಬಸ್ ಯಾತ್ರೆ ನಡೆಸಿದ್ದು, ಕೇಂದ್ರ ಹಾಗೂ ರಾಜ್ಯಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಲಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಬಸ್ ಯಾತ್ರೆಯ ಮೂಲಕ ಬದಲಾವಣೆಯ ಪರ್ವ ಆರಂಭವಾಗಿದೆ. ಬಿಜೆಪಿಯ ದುರಾಡಳಿತಕ್ಕೆ ಅಂತ್ಯ ಹಾಡಿ ಜನಪರವಾದ ಕಾಂಗ್ರೆಸ್ ಸರ್ಕಾರವನ್ನು ಸ್ಥಾಪಿಸುವ ಘೋಷಣೆಯನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ,ಬೆಳಗಾವಿಯಲ್ಲಿ ಹಿಂದೆ ಮಹಾತ್ಮಗಾಂಧಿ ಅವರು ತಂಗಿದ್ದ ಗಾಂಧಿ ಬಾವಿಯ ವೀರಸೌಧದಿಂದ ಕಾಂಗ್ರೆಸ್ನ ಪ್ರಜಾಧ್ವನಿ ರಥಯಾತ್ರೆ ಆರಂಭವಾಗಿದ್ದು, ಜ.೨೪ರವರೆಗೂ ೨೦ ಜಿಲ್ಲೆಗಳಲ್ಲಿ ಈ ಬಸ್ ಯಾತ್ರೆ ಸಂಚರಿಸಲಿದೆ.ಮುಂದಿನ ಚುನಾವಣೆಯ ಪ್ರಚಾರಾಂದೋಲನವನ್ನು ಕಾಂಗ್ರೆಸ್ ಈ ಬಸ್ ಯಾತ್ರೆಯ ಮೂಲಕ ಆರಂಭಿಸಿದ್ದು, ಕಾಂಗ್ರೆಸ್ನ ಎಲ್ಲ ನಾಯಕರು ಒಗ್ಗಟ್ಟಿನಿಂದ ಜಂಟಿ ಬಸ್ಯಾತ್ರೆ ನಡೆಸಿದ್ದಾರೆ.ಬಿಜೆಪಿಯ ಜನಸಂಕಲ್ಪ ಯಾತ್ರೆ, ಕಾಂಗ್ರೆಸ್ನ ಪಂಚರತ್ನ ರಥಯಾತ್ರೆ ನಡೆದಿರುವಾಗಲೇ ಕಾಂಗ್ರೆಸ್ನ ಈ ಪ್ರಜಾಧ್ವನಿ ಬಸ್ ಯಾತ್ರೆ ಚುನಾವಣಾ ಪ್ರಚಾರ ಸಮರಕ್ಕೆ ಮತ್ತಷ್ಟು ಕಾವು ತಂದಿದೆ.ಬೆಳಗಾವಿಯ ಗಾಂಧಿ ಬಾವಿಯಲ್ಲಿಂದು ಈ ಬಸ್ಯಾತ್ರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಹೆಚ್.ಕೆ. ಪಾಟೀಲ್, ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರಖಂಡ್ರೆ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಆರ್.ವಿ. ದೇಶ್ಪಾಂಡೆ ಸೇರಿದಂತೆ ಎಲ್ಲ ಪ್ರಮುಖ ನಾಯಕರುಗಳು ಒಟ್ಟಾಗಿ ರಾಷ್ಟ್ರಪಿತ ಮಹಾತ್ಮಗಾಂಧೀಜಿರವರಿಗೆ ನಮನ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.ಈ ಬಸ್ ಯಾತ್ರೆಯ ಮೂಲಕ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಾಂದೋಲನ ಆರಂಭವಾದಂತಾಗಿದ್ದು, ಈ ಬಸ್ ಯಾತ್ರೆಯ ಜತೆಗೆ ಕಾಂಗ್ರೆಸ್ -ಬಿಜೆಪಿ ಪಾಪದ ಪತ್ರ, ಹಾಗೂ ಬಿಜೆಪಿ ಪಾಪದ ಪುರಾಣ ಅಭಿಯಾನವನ್ನು ಆರಂಭಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಚಾರ್ಜ್ಶೀಟ್ನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸಲಾಗಿದೆ.

ಬಸ್ ಯಾತ್ರೆ
ಜನ ಬಿಜೆಪಿ ಸರ್ಕಾರದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಈ ಸರ್ಕಾರವನ್ನು ಕಿತ್ತೊಗೆದು ಜನಪರ ಸರ್ಕಾರ ಸ್ಥಾಪಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಜನರ ದನಿಗೆ ಧ್ವನಿಯಾಗಿ ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಯಾತ್ರೆಯನ್ನು ಕೈಗೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ನ ಪ್ರಜಾಧ್ವನಿ ಬಸ್ ಯಾತ್ರೆ ಚಾಲನಾ ಸಂದರ್ಭದಲ್ಲಿ ಮಾತನಾಡಿದ ಅವರು, ನವ ಕರ್ನಾಟಕ ನಿರ್ಮಾಣದ ವಚನವನ್ನು ಈ ಯಾತ್ರೆಯ ಮೂಲಕ ಕಾಂಗ್ರೆಸ್ ಪಕ್ಷ ನೀಡುತ್ತಿದೆ. ನಮ್ಮ ಮೇಲೆ ವಿಶ್ವಾಸ ನಂಬಿಕೆ ಇಡಿ. ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ ಎಂಬ ಸಂಕಲ್ಪದೊಂದಿಗೆ ಯಾತ್ರೆ ನಡೆಸಿದ್ದೇವೆ. ನಿಮ್ಮ ಕರ್ನಾಟಕಕ್ಕೆ ನಮ್ಮ ವಚನ ಈ ಯಾತ್ರೆಯ ಘೋಷ ವಾಕ್ಯ ಎಂದರು.
ಜನರ ಬದುಕಿನಲ್ಲಿ ಬದಲಾವಣೆ ತಂದು ಜನರಿಗೆ ಉದ್ಯೋಗ, ರೈತರನ್ನು ಸಶಕ್ತಗೊಳಿಸುವುದು ಕಾಂಗ್ರೆಸ್ನ ವಾಗ್ದಾನ ಎಂದು ಅವರು ಹೇಳಿದರು.
ದುರಾಡಳಿತ ಅಂತ್ಯ
ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತವನ್ನು ಅಂತ್ಯಗೊಳಿಸಿ ಜನಪರ ಸರ್ಕಾರವನ್ನು ತರಲು ಯಾತ್ರೆ ನಡೆಸಿದ್ದೇವೆ. ಜನರ ಆರ್ಶಿವಾದ ನಮಗೆ ಸಿಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಅಂತ್ಯ ಹಾಡಲು ಯಾತ್ರೆ ನಡೆಸಿದ್ದೇವೆ. ಯಾರೇ ಪ್ರಶ್ನೆ ಮಾಡಿದರೂ ಅವರ ವಿರುದ್ಧ ಪ್ರಕರಣ ದಾಖಲಿಸುವ ಬಿಜೆಪಿಯ ದುರಾಡಳಿತಕ್ಕೆ ಅಂತ್ಯ ಹಾಡುತ್ತೇವೆ ಎಂದು ಅವರು ಹೇಳಿದರು.ಇಂದು ಬೆಳಗಾವಿಯಿಂದ ಯಾತ್ರೆ ನಡೆಸಿದ್ದೇವೆ. ಭ್ರಷ್ಟಾಚಾರವನ್ನು ತೊಲಗಿಸಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಜನಪರ ಸರ್ಕಾರವನ್ನು ಸ್ಥಾಪಿಸುತ್ತೇವೆ. ಜನ ಈ ಸರ್ಕಾರದ ಬಗ್ಗೆ ಬೇಸರಗೊಂಡಿದ್ದಾರೆ ಎಂದರು.