
ವಿಧಾನಸಭಾ ಚುನಾವಣೆಯ ಪೂರ್ವತಯಾರಿ ಪರಿವೀಕ್ಷಣೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‌ಕುಮಾರ್ ನೇತೃತ್ವದ ತಂಡ ರಾಜ್ಯಕ್ಕೆ ಆಗಮಿಸಿ, ಸರಣಿ ಸಭೆಗಳನ್ನು ನಡೆಸಿತು.
ಬೆಂಗಳೂರು,ಮಾ.೯:ರಾಜ್ಯದಲ್ಲಿ ಚುನಾವಣಾ ಕಾವು ನಿಧಾನವಾಗಿ ಏರುತ್ತಿರುವಾಗಲೇ ಚುನಾವಣಾ ಆಯೋಗ ಸಹ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ವಿಧಾನಸಭಾ ಚುನಾವಣೆಯ ಪೂರ್ವಭಾವಿ ತಯಾರಿಯ ಪರಿವೀಕ್ಷಣೆಗಾಗಿ ಭಾರತ ಚುನಾವಣಾ ಆಯೋಗದ ಮುಖ್ಯಚುನಾವಣಾ ಆಯುಕ್ತ ರಾಜೀವ್‌ಕುಮಾರ್ ರಾಜ್ಯಕ್ಕೆ ಮೂರು ದಿನಗಳ ಭೇಟಿಗೆ ಇಂದು ಆಗಮಿಸಿ, ರಾಜಕೀಯ ಪಕ್ಷಗಳೂ ಸೇರಿದಂತೆ ಅಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಿದರು.
ರಾಜ್ಯದಲ್ಲಿ ಯಾವಾಗ ಚುನಾವಣೆಗಳನ್ನು ನಡೆಸಬೇಕು, ಚುನಾವಣೆಗೆ ಯಾವ ದಿನಾಂಕ ಸೂಕ್ತ ಎಂಬ ಬಗ್ಗೆಯೂ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಈ ಸಭೆಗಳಲ್ಲಿ ಚರ್ಚೆ ನಡೆಸಿದ್ದು, ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಿದರು.
ದೆಹಲಿಯಿಂದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಕುಮಾರ್ ನೇತೃತ್ವದ ಚುನಾವಣಾ ಆಯೋಗದ ನಿಯೋಗ ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ್ದು, ಚುನಾವಣಾ ಆಯುಕ್ತರುಗಳಾದ ಅನೂಪ್‌ಚಂದ್ರಪಾಂಡೆ, ಅರುಣ್‌ಗೋಯಲ್ ಹಾಗೂ ಉಪ ಆಯುಕ್ತರುಗಳು, ಆಯೋಗದ ಹಿರಿಯ ಅಧಿಕಾರಿಗಳು ನಿಯೋಗದಲ್ಲಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ತಕ್ಷಣವೇ ಮುಖ್ಯ ಚುನಾವಣಾಧಿಕಾರಿಗಳು ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚುನಾವಣಾ ಪೂರ್ವತಯಾರಿಯ ಸಭೆ ನಡೆಸಿದರು.
ಈ ಸಭೆಯಲ್ಲಿ ಅಧಿಕಾರಿಗಳಿಂದ ರಾಜ್ಯದ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ಚುನಾವಣೆಯನ್ನು ಯಾವಾಗ ನಡೆಸಿದರೆ ಸೂಕ್ತ ಎಂಬ ಬಗ್ಗೆಯೂ ಅಧಿಕಾರಿಗಳ ಅಭಿಪ್ರಾಯಗಳನ್ನು ಮುಖ್ಯ ಚುನಾವಣಾ ಆಯುಕ್ತರು ಪಡೆದುಕೊಂಡರು.
ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆಯೂ ಮುಖ್ಯ ಚುನಾವಣಾ ಆಯುಕ್ತರು ಹಿರಿಯ ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಭೆಯಲ್ಲಿ ಮುಖ್ಯಕಾರ್ಯದರ್ಶಿ ವಂದಿತಾಶರ್ಮಾ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ಸೂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ರಾಜಕೀಯ ಪಕ್ಷಗಳ ಜತೆ ಚರ್ಚೆ
ಈ ಸಭೆಯ ನಂತರ ಚುನಾವಣಾ ಮುಖ್ಯ ಆಯುಕ್ತರಾದ ರಾಜೀವ್‌ಕುಮಾರ್‌ರವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೂ ಸಭೆ ನಡೆಸಿ ಚುನಾವಣೆಯ ಸಂಬಂಧ ರಾಜಕೀಯ ಪಕ್ಷಗಳ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದರು.
ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಭೆಯನ್ನು ಮುಖ್ಯಚುನಾವಣಾ ಆಯುಕ್ತರ ನೇತೃತ್ವದ ತಂಡ ನಡೆಸಿತು.
ಕೇಂದ್ರ ಮುಖು ಚುನಾವಣಾ ಆಯುಕ್ತರ ತಂಡ ಇಂದು ಮತ್ತು ನಾಳೆ, ನಾಡಿದ್ದು ಮೂರು ದಿನ ರಾಜ್ಯದಲ್ಲೇ ಮೊಕ್ಕಾಂ ಹೂಡಲಿದ್ದು, ನಾಳೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಚುನಾವಣೆಯ ತಯಾರಿ ಕುರಿತು ವೀಡಿಯೊ ಕಾನ್ಫರೆನ್ಸ್ ಸಭೆ ನಡೆಸಿ ಶನಿವಾರ ಮತದಾರರ ಜಾಗೃತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸುದ್ದಿಗೋಷ್ಠಿ ನಡೆಸಿ ನಂತರ ಈ ತಂಡ ದೆಹಲಿಗೆ ವಾಪಸ್ಸಾಗಲಿದೆ.