ಚುನಾವಣೆಗೂ ಸಿಗುತ್ತಾ ಈ ಆಶೀರ್ವಾದ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.05: ಕುರುಗೋಡು ಕ್ಷೇತ್ರದ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಇಂದು ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಅವರ ತಲೆ ಮೇಲೆ ಕೈ ಇಟ್ಟು ಮಾಡಿರುವ ಆಶಿರ್ವಾದ. ಮುಂಬರುವ ಚುನಾವಣೆಗೂ ದೊರೆಯುತ್ತಾ ಎಂಬುದು ಈಗ ಕ್ಷೇತ್ರದಲ್ಲಿನ ಗುಸು ಗುಸು ಮಾತು.
ಇಂದು ಸುರೇಶ್ ಬಾಬು ಅವರ ಜನ್ನ ದಿನ ಅವರು ಕುರುಗೋಡು ಪಟ್ಟಣದ ಸುಂಕಲಮ್ಮ ದೇವಸ್ಥಾನಕ್ಕೆ ತೆರಳಿದಾಗ ಕಾಕಾತಾಳಿಯೋ ಇಲ್ಲ ಪೂರ್ವ ನಿಯೋಜಿತವೋ ಮಾಜಿ ಶಾಸಕ ನಾರಾಯಣ ರೆಡ್ಡಿ ಅವರು ಇದ್ದರು.
ಸಹಜವಾಗಿ ಹಿರಿಯರಾದ ರೆಡ್ಡಿ ಅವರ ಪಾದಕ್ಕೆರಗಿದ ಸುರೇಶ್ ಬಾಬು ಅವರಿಗೆ ರೆಡ್ಡಿ ಅವರು ತಲೆ ಮೇಲೆ ಕೈಇಟ್ಟು ಶುಭ ಆಶಿರ್ವಾದಿಸಿದರು. ಉಭಯ ಕುಶಲೋಪರಿ ಮಾತನಾಡಿದರು.
ಇದು ವಯಕ್ತಿಕ ಬದುಕಿನ ನೆಲೆಗಟ್ಟಿನಲ್ಲಿ ನಡೆದರೆ ವಿಶೇಷ ಏನೂ ಇರಲಿಲ್ಲ. ರಾಜಕೀಯವಾಗಿ ಬಾಬುದು ಬಿಜೆಪಿ, ರೆಡ್ಡಿಯವರು ಕಾಂಗ್ರೆಸ್. ವಿಧಾನಸಭೆ ಚುನಾವಣೆ ಇನ್ನೆಂಟು ತಿಂಗಳು ಬಾಕಿ‌ ಇರೋವಾಗ ಕೈ ಜೋಡಿಸಿದ್ರಾ ವಿರೋಧಿ ಬಣದ ನಾಯಕರು ಎಂಬ ಕುತೂಹಲ ಕ್ಷೇತ್ರದ ಜನತೆಯದ್ದು.
ಕಳೆದ ಭಾರಿಯ ಚುನಾವಣೆಯಲ್ಲಿ ಕಂಪ್ಲಿಯ ಹಾಲಿ ಶಾಸಕ ಗಣೇಶ್ ಗೆಲುವಿಗೆ ಸೂರ್ಯನಾರಾಯಣರೆಡ್ಡಿ ಅವರ ಸಹಕಾರವೂ ಪ್ರಮುಖವಾಗಿತ್ತು‌. ನಂತರ ಗಣೇಶ್ ಮತ್ತು ರೆಡ್ಡಿ ಅವರ ನಡುವೆ ಉತ್ತಮ ಬಾಂಧವ್ಯ ಇತ್ತು. ಆದರೆ ಇತ್ತೀಚೆಗೆ ಅದು ಇಲ್ಲದಾಗಿ ಪರಸ್ಪರ ದೂರವಾದಂತೆ ಕಾಣುತ್ತಿದೆ.
ಅದಕ್ಕಾಗಿ ಈಗ ಶತ್ರುವಿನ ಶತ್ರು ಮಿತ್ರು ಎಂಬಂತೆ. ಸುರೇಶ್ ಬಾಬು ರೆಡ್ಡಿ ಅವರ ಸಖ್ಯ ಬೆಳಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಮ್ಮ ಗೆಲುವಿಗೆ ಸಹಕಾರ ಪಡೆಯುವ ಪ್ರಯತ್ನ ನಡೆಸಿದ್ದಾರೆಂಬ ಹೇಳಿಕೆಗಳು ಧ್ವನಿಸುತ್ತಿವೆ. ಅದಕ್ಕಾಗಿ ರೆಡ್ಡಿ ಅವರು ಗಣೇಶ್ ಗೆ ಕಿರಿ ಕಿರಿ ಮಾಡಲು, ರಾಮಸಾಗರದ ನಾರಾಯಾಣಪ್ಪ, ಗಂಗಾವತಿಯ ನಾಯಕ್ ಅವರನ್ನು ಕ್ಷೇತ್ರದಲ್ಲಿ ಹರಿದಾಡಲು ಬಿಟ್ಟಿದ್ದಾರೆಂಬ ಆರೋಪ ಕೇಳಿಬರುತ್ತಿದೆ.
ಏನೇ ಆಗಲಿ ಕಂಪ್ಲಿ ಕ್ಷೇತ್ರದಲ್ಲಿ ತಮಗೆ ಬೇಕಾದವರನ್ನು ಗೆಲಿಸಲು, ಇಲ್ಲಾ ಸೋಲಿಸಲು ಸಹಕಾರಿಯಾಗಬಲ್ಲ ಜನ ಬೆಂಬಲದ ಶಕ್ತಿಯನ್ನು ನಾರಾಯಣ ರೆಡ್ಡಿ ಅವರು ಹೊಂದಿದ್ದಾರೆ ಎಂಬುದಂತೂ ಸತ್ಯ.
ಸಧ್ಯ ಕಾಂಗ್ರೆಸ್ ಪಕ್ಷದಲ್ಲಿರುವ ಮತ್ತು ಅವರ ಮಗ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಲು ಬಯಸಿರುವುದರಿಂದ. ಬಿಜೆಪಿಯ ಸುರೇಶ್ ಬಾಬು ಅವರನ್ನು ರೆಡ್ಡಿ ಅವರು ಹೇಗೆ ಬೆಂಬಲಿಸುತ್ತಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೀಡಬೇಕಾಗುತ್ತದೆ.