ಚುನಾವಣೆಗಳು ಪ್ರಜಾತಂತ್ರದ ಉತ್ಸವಗಳು


ಸಂಜೆವಾಣಿ ವಾರ್ತೆ
ಸಂಡೂರು:ಏ:15: ಚುನಾವಣೆಗಳು ಪ್ರಜಾತಂತ್ರದ ಉತ್ಸವಗಳು. ದೇಶದ ಪ್ರಗತಿಯ ದಿಕ್ಕನ್ನು ಬದಲಾಯಿಸುವ ಶಕ್ತಿ ನಮ್ಮ ಮತದಾನಕ್ಕಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತವನ್ನು ಚಲಾಯಿಸಬೇಕು ಎಂದು ಬಳ್ಳಾರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಬಳ್ಳಾರಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ಶರಣಪ್ಪ ಸಂಕನೂರ್ ಅವರು ಅಭಿಪ್ರಾಯ ಪಟ್ಟರು.
ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಬಳ್ಳಾರಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಡೂರು ಹಾಗೂ ಏನ್ ಎಂ ಡಿ ಸಿ ಧೋಣಿಮಲೈ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ದೋಣಿಮಲೈನಲ್ಲಿ ಅತಿ ಕಡಿಮೆ ಮತದಾನವಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಸಿಬ್ಬಂದಿಗಳು ಹಾಗೂ ಪ್ರಜ್ಞಾವಂತ ನಾಗರಿಕರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಡೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್ ಷಡಕ್ಷರಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಡೂರು ತಾಲೂಕಿನಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶ್ರಮಿಸಲಾಗುತ್ತಿದ್ದು ದೋಣಿ ಮಲೈನಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವಲ್ಲಿ ಏನ್ ಎಂ ಡಿ ಸಿ ಸಿಬ್ಬಂದಿಯವರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಹಕರಿಸಬೇಕು ಎಂದು ತಿಳಿಸಿದರು.
ತಾಲೂಕು ದಂಡಾಧಿಕಾರಿ ಹಾಗೂ ಉಪಚುನಾವಣಾಧಿಕಾರಿ ಕೆಎಂ ಗುರುಬಸವರಾಜ ಇವರು ಮಾತನಾಡಿ ನಮ್ಮ ಮತ ನಮ್ಮ ಹಕ್ಕು ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಕೊಟ್ಟೂರಿನ ಹಸಿರು ಹೊನಲ್ಲೂ ತಂಡದವರು, ಬಳ್ಳಾರಿಯ ಚಿಗುರು ತಂಡದವರು, ಕಲಾವಿದರಾದ ಎರ್ರಿಸ್ವಾಮಿ ಹಾಗೂ ಜಡೇಶ್ ಎಮ್ಮಿಗನೂರು ಜಾಗೃತಿ ನಾಟಕ ಹಾಗೂ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏನ್ ಎಂ ಡಿ ಸಿ ದೋಣಿಮಲೈನ ಸಿಜಿಎಂ ಸಂಜೀವ್ ಸಾಹಿ ಅವರು ವಹಿಸಿದ್ದರು. ಅತಿಥಿಗಳಾಗಿ ಶರಣಬಸವರಾಜು ಚುನಾವಣಾ ಅಧಿಕಾರಿಗಳು ಸಂಡೂರು ವಿಧಾನಸಭಾ ಕ್ಷೇತ್ರ, ಜಿಲ್ಲಾ ಪಂಚಾಯಿತಿ ಪ್ರಭಾರ ಯೋಜನಾ ನಿರ್ದೇಶಕ ಪ್ರಮೋದ್, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್, ಏನ್ ಎಂ ಡಿ ಸಿ ಜನರಲ್ ಮ್ಯಾನೇಜರ್ ರಾಮಯ್ಯ, ನರಸಿಂಗಾಪುರ ಗ್ರಾಮ ಪಂಚಾಯಿತಿ ಪಿಡಿಒ ಕರಿಯಪ್ಪ , ಗಣೇಶ್, ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ಜಡಿಯಪ್ಪ ಎಂಕಪ್ಪ, ಉಪಸ್ಥಿತರಿದ್ದರು. ಬನ್ನಿಹಟ್ಟಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಾಣಿ ಪ್ರಾರ್ಥಿಸಿದರು. ದೋಣಿಮಲೈ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವೀರೇಶ್ ಸ್ವಾಗತಿಸಿದರು. ಸಂಡೂರು ತಾಲೂಕು ಮತದಾರ ಸಾಕ್ಷರತಾ ಕೇಂದ್ರ ದ ತಾಲೂಕು ನೋಡಲ್ ಅಧಿಕಾರಿ ಜಿ. ಎಮ್. ಪ್ರದೀಪ್ ಕುಮಾರ್ ಮತದಾರ ಪ್ರತಿಜ್ಞಾವಿಧಿ ಬೋಧಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರ ಮತದಾನ ಜಾಗೃತಿ ಬೈಕ್ ಜಾತಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಾಹುಲ್ ಶರಣಪ್ಪ ಸಂಕನೂರ್ ಅವರು ಚಾಲನೆ ನೀಡಿದರು..