ಚುನಾವಣೆ:ಅಲೆಮಾರಿ ಜನಾಂಗಕ್ಕೆ ಆದ್ಯತೆ ನೀಡಿ

ರಾಯಚೂರು,ಅ.೨೭- ರಾಜ್ಯಾದ್ಯಂತ ಜಿಲ್ಲಾ, ತಾಲೂಕ ಪಂಚಾಯತಿ ಹಾಗೂ ನಗರಪಾಲಿಕೆ, ಮಹಾನಗರ ಪಾಲಿಕೆ ಸೇರಿದಂತೆ ಸಾರ್ವತ್ರಿಕ ಚುನಾವಣೆಗಳಲ್ಲಿ ಎಸ್/ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಅಲೆಮಾರಿ ಜನಾಂಗಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕೆಂದು ಅಲೆಮಾರು ಬುಡಕಟ್ಟು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣಕುಮಾರ ಕೊತ್ತಗೇರಿ ಹೇಳಿದರು.
ಅವರಿಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಲೆಮಾರಿ ಜನಾಂಗದ ಹಂದಿಜೋಗಿ, ಸಿಳ್ಳೇಕ್ಯಾತಾಸ್, ಸುಡುಗಾಡು ಸಿದ್ದ, ಕೊರಮ-ಕೊರಚ, ಬುಡ್ಗಜಂಗಮ, ಹಕ್ಕಿಪಿಕ್ಕಿ ಸೇರಿದಂತೆ ಇನ್ನಿತರ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಿಂದ ವಂಚಿತರಾಗಿದ್ದು, ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ರಾಜಕೀಯ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕೆಂದು ಅವರು ಒತ್ತಾಯಿಸಿದರು.
ನಗರಸಭೆ ಸದಸ್ಯೆ ರೆಣಮ್ಮ ಅವರ ಜಾತಿ ಪರಿಶೀಲನೆ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯ ನಿರ್ಣಯ ಅಸಂವಿಧಾನಿಕ ಮತ್ತು ಅವೈಜ್ಞಾನಿಕವಾಗಿದ್ದು, ಅಂತ್ರೋಪಾಲಜಿ, ಯತ್ನೋಪಾಲಜಿ ಮತ್ತು ಕೇಂದ್ರ ಮಾನವ ಕುಲ ಅಧ್ಯಯನ ಶಾಸ್ತ್ರಗಳ ನಿಯಮಗಳ ಉಲ್ಲಂಘನೆಯಾಗಿದೆ ಎಂದರು.
ಪ್ರತಿ ೨೫ ಕಿ.ಮೀ.ಭಾಷೆ ಬೇರೆ ಬೇರೆ ರೀತಿಯಾಗಿರುತ್ತದೆ. ಈ ಕುರಿತು ಸರಿಯಾಗಿ ಅಧ್ಯಯನ ಮಾಡಬೇಕು. ದಕ್ಷಿಣ ಕರ್ನಾಟಕದಲ್ಲಿ ಶಿಲ್ಲೆಕ್ಯಾತಸ್ ಮತ್ತು ಉತ್ತರ ಕರ್ನಾಟಕದಲ್ಲಿ ಕಿಲ್ಲೆಕ್ಯಾತಸ್ ಎರಡು ಒಂದೇ ಆಗಿವೆ. ನಗರಸಭೆ ಸದಸ್ಯೆ ಅವರು ಸುಳ್ಳು ಜಾತಿ ಪ್ರಮಾಣ ಪಡೆದಿದ್ದಾರೆಂದು ಕ್ರಿಮಿನಲ್ ಕೇಸ್ ಹೂಡಿದರೆ ಉಪವಾಸ ಸತ್ಯಾಗ್ರಹ ಮತ್ತು ಕಾನೂನು ಹೋರಾಟ ಮಾಡಲಾಗುವುದು ಎಂದರು.
ದೇವದುರ್ಗ ತಾಲೂಕಿನ ಮಾದಗಟ್ಟೆ ಗ್ರಾಮದಲ್ಲಿ ಅಲೆಮಾರಿ ಜನಾಂಗದ ೩೨೦ಕ್ಕೂ ಹೆಚ್ಚಿನ ಗುಡಿಸಲುಗಳನ್ನು ಕಿತ್ತಿಸಿ ಹೊಸ ಮನೆಗಳನ್ನು ನಿರ್ಮಾಣಮಾಡುವುದಾಗಿ ಹೇಳಿದ್ದಾರೆ. ಆದರೆ ಇನ್ನೂ ವರೆಗೆ ಮನೆಗಳ ನಿರ್ಮಾಣ ಕಾರ್ಯ ಮುಗಿದಿರುವುದಿಲ್ಲ. ಈ ಕೂಡಲೇ ಮನೆಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ವೆಂಕಟರಮಣಯ್ಯ, ಉಪಾಧ್ಯಕ್ಷರಾದ ಬಿ.ಹೆಚ್.ಮಂಜುನಾಥ, ಅನಂತಕುಮಾರ ಏಕಲವ್ಯ, ಜಿಲ್ಲಾಧ್ಯಕ್ಷ ಶಿವರಾಜ ರುದ್ರಾಕ್ಷಿ, ಜಿಲ್ಲಾ ಉಪಾಧ್ಯಕ್ಷ ಯಮನೂರಪ್ಪ, ಜಿಲ್ಲಾ ಗೌರವಾಧ್ಯಕ್ಷ ಭೀಮಣ್ಣ ಅಲ್ಕೋಡ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಸೇನಪ್ಪ ಬಿ. ವಿಭೂತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.