
ಕೋಲ್ಕತ್ತಾ,ಜು.೮- ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಯ ಮತದಾನವಾದ ಇಂದು ಹಿಂಸಾಚಾರ ಭುಗಿಲೆದ್ದಿದ್ದು, ಹಿಂಸಾಚಾರಕ್ಕೆ ೯ ಮಂದಿ ಬಲಿಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ, ಹಿಂಸಾಚಾರದಲ್ಲಿ ಮೃತಪಟ್ಟವರಲ್ಲಿ ಐವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಬಿಜೆಪಿ, ಎಡಪಕ್ಷ ಮತ್ತು ಕಾಂಗ್ರೆಸ್‌ನ ತಲಾ ಒಬ್ಬ ಕಾರ್ಯಕರ್ತ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದ ಪಶ್ಚಿಮ ಬಂಗಾಳದಲ್ಲಿ ಮತದಾನ ದಿನವೂ ಹಿಂಸಾಚಾರ ನಡೆದು ಹಲವರನ್ನು ಕೊಲೆ ಮಾಡಲಾಗಿದೆ.
ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿಯ ಪ್ರತಿಷ್ಠೆಯ ಕಣವಾಗಿರುವ ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆಯ ಮತದಾನ ಬೆಳಗ್ಗೆಯಿಂದ ಆರಂಭವಾಗಿದ್ದು ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸಿದ ಹಿಂಸಾಚಾರದಿಂದ ಎಂಟು ಮಂದಿ ಬಲಿಯಾಗಿರುವ ಘಟನೆ ವರಿದಿಯಾಗಿದೆ.
ಪಶ್ಚಿಮಬಂಗಾಳದ ಪೂಚ್‌ಬೆಹಾರ್ ಉತ್ತರ೨೪ ಪರಗಣ ಜಿಲ್ಲೆ, ಮುರ್ಷಿದಾಬಾದ್ ಜಿಲ್ಲೆ, ಮಾಲ್ಡಾ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದೆ. ಕೂಚ್‌ಬೆಹಾರ್ ಜಿಲ್ಲೆಯ ಫಲಿಮರಿ ಗ್ರಾಮಪಂಚಾಯತ್‌ನಲ್ಲಿ ಬಿಜೆಪಿ ಬೂತ್ ಏಜೆಂಟ್ ಮದಾಬ್‌ಬಿಸ್ವಾದ್ ಎಂಬುವರು ಮತಗಟ್ಟೆ ಪ್ರವೇಶ ಮಾಡುವ ವೇಳೆ ಟಿಎಂಸಿ ಕಾರ್ಯಕರ್ತರು ತಡೆದಿದ್ದು, ಆಗ ನಡೆದ ಘರ್ಷಣೆಯಲ್ಲಿ ಬಿಸ್ವಾಸ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ. ಇದನ್ನು ಟಿಎಂಸಿ ನಿರಾಕರಿಸಿದೆ.ಕೂಚಿಬೆಹಾರ್‌ನ ತೂಫಾನ್‌ಗಂಜ್‌ನಲ್ಲಿ ಓರ್ವ ವ್ಯಕ್ತಿಯ ಹತ್ಯೆಯೂ ಆಗಿದೆ.ಉತ್ತರ ೨೪ ಪರಗಣ ಜಿಲ್ಲೆಯ ಕದಂಬಗಾಚಿಯಲ್ಲಿ ಪಕ್ಷೆತರ ಅಭ್ಯರ್ಥಿಯ ಬೆಂಬಲಿಗರನ್ನು ಥಳಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ಲಾ (೪೧) ಎಂಬುವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮುರ್ಷಿದಾಬಾದ್ ಜಿಲ್ಲೆಯ ಕಪಾಸ್‌ದಂದ್ ಪ್ರದೇಶದಲ್ಲಿ ನಡೆದ ಚುನಾವಣಾ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ.ಮಾಲ್ಡಾ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಟಿಎಂಸಿ ನಾಯಕನ ಸಹೋದರ ಮಲೇಖ್‌ಶೇಖ್ ಎಂಬುವರನ್ನೂ ಕೊಲೆ ಮಾಡಲಾಗಿದೆ. ಒಟ್ಟಾರೆ ೯ ಮಂದಿ ಇದುವರೆಗೂ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.
ಪಂಚಾಯ್ತಿ ಚುನಾವಣೆಗಳಿಗೆ ಜೂನ್ ೮ ರಂದು ದಿನಾಂಕ ಘೋಷಣೆಯಾದಾಗಿನಿಂದ ಇದುವರೆಗಿನ ಹಿಂಸಾಚಾರದಲ್ಲಿ ೧೫ ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪಂಚಾಯತ್ ಚುನಾವಣೆ ಮತದಾನವಾದ ಇಂದು ಬಿಗಿಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಜತೆಗೆ ಕೇಂದ್ರದ ೬೦೦ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.ಪಶ್ಚಿಮಬಂಗಾಳದ ೨೦ ಜಿಲ್ಲೆಗಳ ೯೨೮ ಜಿಲ್ಲಾ ಪರಿಷತ್ ಸ್ಥಾನಗಳಿಗೆ ೨೨ ಜಿಲ್ಲೆಗಳ ೯,೭೩೦ ಪಂಚಾಯ್ತಿ ಸಮಿತಿಗಳಿಗೆ ಹಆಗೂ ೬೩,೨೨೯ ಗ್ರಾಮಪಂಚಾಯ್ತಿಗಳಿಗೆ ಚುನಾವಣೆಗಳು ನಡೆದಿವೆ. ಈ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಇಂಡಿಯನ್ ಸೆಕ್ಯುಲರ್ ಫ್ರಂಟ್ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿತಲು ತೀವ್ರ ಹಣಾಹಣಿ,ಹಿಂಸಾಚಾರ, ಪರಿಸ್ಪರರ ನಿಂದನೆ, ಆರೋಪ ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ.
ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿಗೆ ಎರಡೂ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿದೆ.
ರಾಜ್ಯದ ಗ್ರಾಮೀಣ ಪ್ರದೇಶದ ೭೩,೮೮೭ ಕ್ಷೇತ್ರಗಳಲ್ಲಿ ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭವಾಗಿದ್ದು, ೫.೬೭ ಕೋಟಿ ಮತದಾರರು ಸುಮಾರು ೨.೦೬ ಲಕ್ಷ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.ಬೆಳಿಗ್ಗೆ ೬ ಗಂಟೆಯಿಂದಲೇ ಮತಗಟ್ಟೆಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದವು, ಮಳೆಯ ನಡುವೆ ಜನರು ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು
ಆಡಳಿತಾರೂಢ ಟಿಎಂಸಿ ಎಲ್ಲಾ ೯೨೮ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಪಂಚಾಯತ್ ಸಮಿತಿಗಳ ೯,೪೧೯ ಸ್ಥಾನಗಳು ಮತ್ತು ಗ್ರಾಮ ಪಂಚಾಯಿತಿಗಳ ೬೧,೫೯೧ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ ೮೯೭ ಜಿಲ್ಲಾ ಪರಿಷತ್ ಸ್ಥಾನಗಳು, ೭,೦೩೨ ಪಂಚಾಯತ್ ಸಮಿತಿ ಸ್ಥಾನಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ೩೮,೪೭೫ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.೨೦೧೮ ರಲ್ಲಿ, ತೃಣಮೂಲ ಕಾಂಗ್ರೆಸ್ ಪಂಚಾಯತ್ ಚುನಾವಣೆಗಳಲ್ಲಿ ೩೪ ಪ್ರತಿಶತದಷ್ಟು ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿತು, ಕಳೆದ ಪಂಚಾಯತ್ ಚುನಾವಣೆಯಲ್ಲೂ ಹಿಂಸಾಚಾರಗಳು ನಡೆದಿದ್ದವು.
ರಾಜ್ಯಪಾಲರ ಖಂಡನೆ
ಪಂಚಾಯತ್ ಚುನಾವಣೆಯಲ್ಲಿ ನಡೆದಿರುವ ಹಿಂಸಾಚಾರವನ್ನು ರಾಜ್ಯಪಾಲ ಸಿ.ವಿ ಆನಂದ್‌ಬೋಸ್ ಖಂಡಿಸಿದ್ದಾರೆ.
ಯಾವುದೇ ಚುನಾವಣೆಗಳು ಬ್ಯಾಲೆಟ್ ಮೂಲಕ ನಡೆಯಬೇಕೇ ಹೊರತು ಬುಲೆಟ್ ಮೂಲಕ ಅಲ್ಲ ಎಂದು ರಾಜ್ಯಪಾಲ ಸಿವಿ ಆನಂದ ಬೋಸ್ ಹೇಳಿದ್ದಾರೆ.
ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿರುವ ಅವರು ಶಾಂತಿಯುತವಾಗಿ ಮತದಾನ ನಡೆಯಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.ಇದೇ ಮೊದಲ ಬಾರಿಗೆ ಪಂಚಾಯತ್ ಚುನಾವಣೆಯ ಸಂಬಂಧ ಪಶ್ಚಿಮಬಂಗಾಳದ ರಾಜ್ಯಪಾಲರೊಬ್ಬರು ತಮ್ಮ ಅಧಿಕೃತ ನಿವಾಸ ಶಾಂತಿ ನಿವಾಸದಲ್ಲಿ ಚುನಾವಣಾ ಸಂಬಂಧಿತ ಹಿಂಸಾಚಾರದ ಬಗ್ಗೆ ಸುದ್ದಿಗಾರರದೊಂದಿಗೆ ಮಾತನಾಡಿದ್ದಾರೆ.