
ಗದಗ,ಏ22 : ಭಾರತ ದೇಶವು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದೆ. ಪ್ರತಿಯೊಂದು ಮತವು ಅಮೂಲ್ಯವಾಗಿದ್ದು ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾನದ ಪಾತ್ರ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅರ್ಹ ಮತದಾರರು ತಪ್ಪದೇ ತಮ್ಮ ಮತ ಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ಚಟುವಟಿಕೆಗಳ ನಿರ್ವಹಣಾ ಸಮಿತಿ ಸದಸ್ಯ ಆರ್.ಎಸ್. ಬುರುಡಿ ತಿಳಿಸಿದರು.
ಅವರು ಕುರ್ತಕೋಟಿ ಗ್ರಾಮದಲ್ಲಿ ಜರುಗಿದ ಸ್ವೀಪ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡವ ಶ್ರೀಮಂತರೆನ್ನದೆ ಒಬ್ಬ ವ್ಯಕ್ತಿ-ಒಂದು ಮತ ಎಂಬ ತತ್ವದಂತೆ ನಮ್ಮ ಜನಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡುವ ಅವಕಾಶವನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ಮೇ 10 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ರವರೆಗೆ ನಡೆಯಲಿರುವ ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ನಮ್ಮ ಮತ-ನಮ್ಮ ಹಕ್ಕು ಎಂಬ ಸ್ವಾಭಿಮಾನದ ಅರಿವು ನಮ್ಮದಾಗಬೇಕು. ಸ್ವಗ್ರಾಮದಿಂದ ಬೇರೊಂದು ಪ್ರದೇಶಕ್ಕೆ ವಿದ್ಯಾಭ್ಯಾಸ,ಉದ್ಯೋಗ ಹಾಗೂ ಇತರೆ ಕಾರಣಕ್ಕಾಗಿ ವಲಸೆ ಹೋದವರು ತಮ್ಮ ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿ ವಿವಿಧ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮೇ 10ರಂದು ನಡೆಯುವ ಪ್ರಜಾಪ್ರಭುತ್ವದ ಚುನಾವಣಾ ಹಬ್ಬದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಮತದಾನ ಮಾಡಬೇಕೆಂದರು. ಇದೇ ಸಂದರ್ಭದಲ್ಲಿ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕುರ್ತಕೋಟಿ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಿಡಿಓ, ಸಿಬ್ಬಂದಿ ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು, ಬಿ.ಎಲ್.ಓ, ಆಶಾ ಕಾರ್ಯಕರ್ತರು ಇತರರು ಹಾಜರಿದ್ದರು.