ಚುನಾವಣಾ ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆ 1950 ಬಳಸಿ


ಬಳ್ಳಾರಿ,ಏ.02: ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಲು ಟೋಲ್ ಫ್ರೀ ಸಂಖ್ಯೆ 1950 ಬಳಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಈಗಾಗಲೇ ಚುನಾವಣೆ ಪ್ರಕಟವಾದ ದಿನಾಂಕದಿಂದ ಏಪ್ರಿಲ್ 1 ರವರೆಗೆ ವಿವಿಧ ಬಗೆಯ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಪಡೆಯಲು 30ಕ್ಕಿಂತ ಹೆಚ್ಚು ಕರೆ ಮಾಡಲಾಗಿರುತ್ತದೆ. ಅದರಲ್ಲಿ ಮತದಾರರ ನೊಂದಣಿ, ಮತದಾರರ ಸ್ಥಳ ವರ್ಗಾವಣೆ ಮತ್ತು ಚುನಾವಣೆಯ ಮತದಾರರ ಗುರುತಿನ ಚೀಟಿಯನ್ನು ಪಡೆಯುವ ಕುರಿತು ಕರೆಗಳಾಗಿರುತ್ತವೆ. ಇದಲ್ಲದೇ ಭಾರತೀಯರಾಗಿದ್ದು, ಇತರೆ ದೇಶದಲ್ಲಿ ವಾಸವಾಗಿರುವ ಭಾರತೀಯರು ಸಹ ಕರೆ ಮಾಡಿ ಮತದಾರರ ಪಟ್ಟಿಯಲ್ಲಿ ನೊಂದಣಿಗೆ ಕುರಿತು ಮಾಹಿತಿ ಪಡೆದಿರುತ್ತಾರೆ.
ಹೊಸದಾಗಿ ಮತದಾರರ ಪಟ್ಟಿಗೆ ನೊಂದಾಯಿಸಿಕೊಳ್ಳಲು ಮತ್ತು ವರ್ಗಾವಣೆ, ತಿದ್ದುಪಡಿ ಮಾಡಲು ಇದೇ ಏಪ್ರಿಲ್ 11 ರವರೆಗೆ ಅವಕಾಶವಿರುತ್ತದೆ.  ಸಾರ್ವಜನಿಕರು ಚುನಾವಣೆ ಸಂಬಂಧಿಸಿದ ಮಾರ್ಗದರ್ಶನ ಜೊತೆಗೆ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳ ಮಾಹಿತಿ ನೀಡಲು ಈ ಟೋಲ್‍ಫ್ರೀ ಸಂಖ್ಯೆ 1950 ಬಳಸಬಹುದಾಗಿದೆ.
*CVIGIL Citigen App  ಬಳಸಿ:* ಭಾರತ ಚುನಾವಣಾ ಆಯೋಗವು ಕರಾರು ಹೊಕ್ಕಾಗಿ ಚುನಾವಣೆ ನೀತಿ ಸಂಹಿತೆ ಜಾರಿಗೆ ತರುವುದು ಮತ್ತು ಚುನಾವಣೆ ಆಕ್ರಮ ತಡೆಗಟ್ಟಲು ಹಾಗೂ ಆಸೆ, ಆಮಿಷಗಳನ್ನು ಸ್ಥಳದಲ್ಲೇ ಚಿತ್ರೀಕರಿಸಲು ಸಿವಿಜಿಲ್ ಸಿಟಿಜನ್ ಆಪ್ ಚಾಲ್ತಿಯಲ್ಲಿರುತ್ತದೆ. ಸಾರ್ವಜನಿಕರು ತಮ್ಮ ಮೊಬೈಲ್ ಪ್ಲೇಸ್ಟೋರ್‍ನಲ್ಲಿ CVIGIL Citigen App  ಎಂದು ಟೈಪ್ ಮಾಡಿ ಡೌನ್‍ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರದ ವಿವರ, ಅಂಚೆ ಪಿನ್‍ಕೋಡ್ ನಮೂದಿಸಿ ನೊಂದಾಯಿಸಿಕೊಳ್ಳಬೇಕು.
  ಅವಕಾಶಗಳು: ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪೋಟೋ, ವಿಡೀಯೋ ಮೂಲಕ ನೇರ ಸೆರೆ ಹಿಡಿದು ವಾಯ್ಸ್ ಮೂಲಕ ಕಳುಹಿಸಬಹುದು. ಇದು ನೇರವಾಗಿ ಚುನಾವಣಾಧಿಕಾರಿಗಳ ತಂಡಕ್ಕೆ ತಲುಪಲಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ತಂಡಗಳು ಕಾರ್ಯ ಪ್ರವೃತ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.
CVIGIL Citigen App  ಕಟ್ಟುನಿಟ್ಟಿನ ಚುನಾವಣಾ ಆಕ್ರಮಗಳನ್ನು ತಡೆಗಟ್ಟಲು ಸದಾ ಕಾವಲಾಗಿರುತ್ತದೆ. ಪ್ರತಿಯೊಬ್ಬ ನಾಗರೀಕರು ಈ ಆಪ್‍ನ್ನು ಸ್ವಯಂ ಪ್ರೇರಿತವಾಗಿ ಬಳಸಿ ಚುನಾವಣೆಗೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಬೇಕು. ಇದರಿಂದ ಪಾರದರ್ಶಕ ಚುನಾವಣೆ ನಡೆಸಬಹುದಾಗಿದ್ದು, ಯಾವುದೇ ಆಕ್ರಮಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ಇದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಕೂಡ ಆಗಿರುತ್ತದೆ.  ಸಿವಿಜಲ್ ಆಪ್ ಬಳಸಿ ಕಠಿಣ ನೀತಿ ಸಂಹಿತೆ ಜಾರಿಗೆ ಸಹಕರಿಸಿ ಎಂದು ಅವರು ತಿಳಿಸಿದ್ದಾರೆ.