ಚುನಾವಣಾ ವೆಚ್ಚ ವೀಕ್ಷಕರ ಸಭೆ

ಗದಗ, ಏ.14: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ವಿಎಸ್‍ಟಿ, ಎಫ್‍ಎಸ್‍ಟಿ ತಂಡಗಳು ಚುರುಕಿನ ಕಾರ್ಯಾಚರಣೆಗೆ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಚುನಾವಣಾ ವೆಚ್ಚ ವೀಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕಿಂತ ಮುಂಚೆಯಿಂದಲೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ತೀವ್ರ ನಿಗಾ ವಹಿಸಲು ಆರಂಭಗೊಂಡಿದೆ. ಪ್ರತಿನಿತ್ಯ ಎಲ್ಲ ಹೆದ್ದಾರಿಗಳ ಮೇಲಿನ ವಾಹನಗಳ ಬಸ್, ಲಾರಿ, ಸಂಶಯಾಸ್ಪದ ಸಾಗಣೆಗಳ ಮೇಲೆ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆಂದು ತಿಳಿಸಿದರು. ಚುನಾವಣಾ ಅವಧಿಯಲ್ಲಿ ಎಲ್ಲ ಬ್ಯಾಂಕುಗಳ ಮೂಲಕ ನಡೆಯಬಹುದಾದ ಅನುಮಾನಾಸ್ಪದ ವ್ಯವಹಾರಗಳು, ಹಣ ಪಡೆಯುವ ಹಾಗೂ ಠೇವಣಿ ಇಡುವವರ ಬಗ್ಗೆ ಬ್ಯಾಂಕುಗಳು ಪ್ರತಿನಿತ್ಯ ಮಾಹಿತಿ ಒದಗಿಸಲಿವೆ ಎಂದು ಅವರು ತಿಳಿಸಿದರು. ಈ ವರೆಗೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಾಗೂ ವಶಪಡಿಸಿಕೊಂಡ ಸಾಮಗ್ರಿಗಳ ಬಗ್ಗೆ ಅವರು ಸಭೆಗೆ ತಿಳಿಸಿದರು.
ಚುನಾವಣಾ ವೆಚ್ಚ ವೀಕ್ಷಕರಾದ ಪಿ.ಎಮ್.ಸೇಂಥಿಲ್ ಕುಮಾರ ಹಾಗೂ ಸತ್ಯ ನಾರಾಯನ ಚಿನಗಮ್ ಅವರುಗಳು ಗದಗ ಜಿಲ್ಲೆಯ ಮಾಹಿತಿಯನ್ನು ಪಡೆದು ಮಾತನಾಡಿ ಇವರೆಗೂ ಚುನಾವಣೆ ವೆಚ್ಚ ಹಾಗೂ ಶಾಂತಿ ಸುವ್ಯವಸ್ಥೆ ಹಾಗೂ ಶಿಸ್ತು ಕ್ರಮದ ಕುರಿತು ಜಿಲ್ಲಾಡಳಿತದಿಂದ ಉತ್ತಮ ಕಾರ್ಯಗಳಾಗಿವೆ. ಚುನಾವಣಾ ಮುಕ್ತಾಯದ ವರೆಗೂ ಸಹ ಶಿಸ್ತು ಬದ್ಧ ಕಾರ್ಯನಿರ್ವಹಣೆಯ ಮೂಲಕ ಚುನಾವಣಾ ಯಶಸ್ವಿಗೊಳಿಸಬೇಕು. ಹಾಗೂ ವೆಚ್ಚದ ವಿವರವನ್ನು ಸಂಬಂಧಿಸಿದ ನಮೂನೆಯಲ್ಲಿ ನಿಗದಿತ ಅವಧಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ರಚಿಸಲಾದ ವೆಚ್ಚ ಸಮಿತಿಯ ಸದಸ್ಯರು ಕ್ಷೇತ್ರವಾರು ವರದಿ ನೀಡುವ ಬಗ್ಗೆ ಹಾಗೂ ಮಾಧ್ಯಮದಲ್ಲಿ ಪ್ರಕಟವಾದ ಜಾಹೀರಾತು ಹಾಗು ಕಾಸಿಗಾಗಿ ಸುದ್ದಿ ವರದಿಯನ್ನು ವೆಚ್ಚಕ್ಕೆ ಸೇರಿಸುವ ಕುರಿತು ಸೇರಿದಂತೆ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಮಾದರಿ ನೀತಿ ಸಂಹಿತೆ ನೊಡೆಲ್ ಅಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪೆÇಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಜೆ.ಸಿ.ಪ್ರಶಾಂತ ಸೇರಿದಂತೆ ವಿವಿಧ ನೋಡೆಲ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತದ ನಂತರ ವೆಚ್ಚ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದಲ್ಲಿ ತೆರೆಯಲಾದ ಚುನಾವಣೆಗೆ ಸಂಬಂಧಿಸಿದ ಸಹಾಯವಾಣಿ ಕೇಂದ್ರ, ನಿಯಂತ್ರಣ ಕೊಠಡಿ ಹಾಗೂ ಮಾಧ್ಯಮ ಕಣ್ಗಾವಲು ಕೋಶಕ್ಕೆ ವೆಚ್ಚ ವೀಕ್ಷಕರು ಭೇಟಿ ನೀಡಿ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದರು.