ಚುನಾವಣಾ ವೆಚ್ಚ ವೀಕ್ಷಕರಿಂದ ವಿವಿಧ ಸಿದ್ಧತೆಗಳ ಪರಿಶೀಲನೆ : ಸಂಶಯಾಸ್ಪದ ಚಟುವಟಿಕೆ ಮೇಲೆ ತೀವ್ರ ನಿಗಾಕ್ಕೆ ಸೂಚನೆ

ವಿಜಯಪುರ: ಎ.15:ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕು. ಸಂಶಯಾಸ್ಪದ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಹೆದ್ದಾರಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ವಾಹನ ತಪಾಸಣೆ ಕಾರ್ಯದ ಜೊತೆಗೆ ಅಕ್ರಮ ಚುಟುವಟಿಕೆ ಬಗ್ಗೆ ನಿಗಾ ವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಭಾರತ ಚುನಾವಣಾ ಆಯೋಗದ ವತಿಯಿಂದ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡ ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಮತಕ್ಷೇತ್ರದ ವೆಚ್ಚ ವೀಕ್ಷಕರಾದ ಗೋಲಾಪ್ ಪ್ರಜ್ಞಾ ರಾಜೇಂದ್ರ, ಬಸವನಬಾಗೇವಾಡಿ ಮತ್ತು ಬಬಲೇಶ್ವರ ಮತಕ್ಷೇತ್ರದ ವೆಚ್ಚ ವೀಕ್ಷಕರಾದ ಹರ್ಮಾ ಧರ್ಮೇಂದ್ರಕುಮಾರ, ಬಿಜಾಪುರ ನಗರ ಮತಕ್ಷೇತ್ರದ ವೆಚ್ಚ ವೀಕ್ಷಕರಾದ ರವೀಂದ್ರ, ನಾಗಠಾಣ ಮತಕ್ಷೇತ್ರದ ವೆಚ್ಚ ವೀಕ್ಷಕರಾದ ನಂದಿನಿ ಆರ್. ನಾಯರ್ ಹಾಗೂ ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ ವೆಚ್ಚ ವೀಕ್ಷಕರಾದ ರೋಶನ್‍ಲಾಲ್ ಅವರು ಈವರೆಗೆ ಕೈಗೊಂಡ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ನಿಯೋಜಿತ ಎಲ್ಲ ಅಧಿಕಾರಿಗಳು ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ವೆಚ್ಚಕ್ಕೆ ಸಂಬಂಧಿಸಿದ ನಿಗದಿತ ನಮೂನೆಗಳನ್ನು ನಿಯಮಿತವಾಗಿ ನಿರ್ವಹಿಸಬೇಕು. ಚೆಕ್‍ಪೋಸ್ಟ್‍ಗಳಲ್ಲಿಯೂ ಕೂಡ ಒಂದೇ ನಮೂನೆ ನಿರ್ವಹಣೆ ಮಾಡಬೇಕು. ಎಲ್ಲ ವೆಚ್ಚಗಳನ್ನು ವಹಿಯಲ್ಲಿ ದಾಖಲಿಸಬೇಕು. ಹಣ ಮತ್ತು ಮದ್ಯ ಸಾಗಾಣಿಕೆ ಮೇಲೆ ತೀವ್ರ ನಿಗಾ ಇರಿಸಬೇಕು. ಸ್ಥಿರ ಕಣ್ಗಾವಲು ಸಮಿತಿ ಹಾಗೂ ಫ್ಲೈಯಿಂಗ್ ಸ್ಕ್ವಾಡ್‍ಗಳು ಪ್ರತಿ ವಿವರಗಳ ಬಗ್ಗೆ ಎಚ್ಚರಿಕೆ ವಹಿಸಿ ವರದಿ ನೀಡಬೇಕು ಎಂದು ಸಲಹೆ ನೀಡಿದ ಅವರು, ಚುನಾವಣಾ ಅಕ್ರಮಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಹಣಕಾಸಿನ ವಹಿವಾಟಿನ ವಿವರಗಳನ್ನು ಪಡೆಯುತ್ತಿದೆ. ಯಾವುದೇ ಸಂಶಯಾಸ್ಪದ ವಹಿವಾಟು, ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ಸಂಬಂಧಪಟ್ಟ ನಿಯೋಜಿತ ತಂಡದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಫ್ಲಾಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೈಲೆನ್ಸ್ ತಂಡ, ವಿಡಿಯೋ ವಿವಿಂಗ್ ತಂಡ, ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಚುನಾವಣೆಗಾಗಿ ನಿಯೋಜಿಸಿರುವ ಎಲ್ಲ ಅಧಿಕಾರಿಗಳು, ಸಮನ್ವಯತೆಯೊಂದಿಗೆ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಜನತೆಯ ಆತ್ಮವಿಶ್ವಾಸ ಹೆಚ್ಚಿಸುವಂತಹ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ವಿವಿಧ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವ ಜೊತೆಗೆ ನಿಗದಿತ ಸಮಯದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿವಿಧ ವೆಚ್ಚಗಳಿಗೆ ಸಂಬಂಧಪಟ್ಟಂತೆ ನಿಗದಿತ ನಮೂನೆಯಲ್ಲಿ ನೀಡಬೇಕು. ವಿಶೇಷವಾಗಿ ತಮ್ಮ ಕರ್ತವ್ಯವನ್ನು ಪರಿಪಾಲಿಸುವಂತೆ ಸೂಚಿಸಿದ ಅವರು, ಈಗಾಗಲೇ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ಅಕ್ರಮ ಸಾಮಗ್ರಿಗಳ ಪರಿಶೀಲನೆ ಜೊತೆಗೆ ಸಾಕ್ಷಾಧಾರದೊಂದಿಗೆ ವಿವಿಧ ಕಡತಗಳಲ್ಲಿ ತಪ್ಪದೇ ನಮೂದಿಸುವಂತೆ ಸೂಚಿಸಿದರು

ವೆಚ್ಚ ವೀಕ್ಷಕರಿಗೆ ಜಿಲ್ಲೆಯ ಸಾಮಾಜಿಕ, ಆರ್ಥಿಕ, ಭೌಗೋಳಿಕ, ಐತಿಹಾಸಿಕ ಚಿತ್ರಣವನ್ನು ನೀಡಿದ ಜಿಲ್ಲಾಧಿಕಾರಿಗಳು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಈಗಾಗಲೇ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿವಿಧ ಸಮಿತಿಗಳ ರಚನೆ ಕುರಿತಂತೆ ವಿವರಿಸಿ, ಜಿಲ್ಲಾಡಳಿತ ಕೈಗೊಂಡಿರುವ ಅನುಷ್ಠಾನದ ವಿವರ ನೀಡಿದ ಜಿಲ್ಲಾಧಿಕಾರಿಗಳು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿರುವುದರಿಂದ ಮೆರವಣಿಗೆ, ವಾಹನಗಳ ಓಡಾಟ ಹೆಚ್ಚಾಗುತ್ತದೆ. ಪ್ರತಿ ಚಲನವಲನ ಕುರಿತು ಸೂಕ್ಷ್ಮವಾಗಿ ಅವಲೋಕಿಸುವಂತೆ ಹಾಗೂ ವಿಡಿಯೋ ವಿವಿಂಗ್ ಟಿಂ, ಫ್ಲಾಯಿಂಗ್ ಸ್ಕ್ವಾಡ್, ಚುನಾವಣಾ ಸಂಬಂಧಿತ ನೋಡಲ್ ಅಧಿಕಾರಿಗಳು ನಿರ್ವಾಚಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ ಅವರು ಮಾತನಾಡಿ, ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೋಲಿಸ್ ಹಾಗೂ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಅಬಕಾರಿ ಅಕ್ರಮಗಳ ಬಗ್ಗೆ ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ವಾಣಿಜ್ಯ ತೆರಿಗೆಗಳ ಇಲಾಖೆ ಅಧಿಕಾರಿಗಳು ಈವರೆಗೆ ವಶಪಡಿಸಿಕೊಂಡ ವಸ್ತುಗಳ ಕುರಿತು ವಿವರ ನೀಡಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ವೆಚ್ಚ ವೀಕ್ಷಕರಿಗೆ ಅಕ್ರಮ ಹಣ ವರ್ಗಾವಣೆ, ಜಮಾ, ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಚುನಾವಣೆಗೆ ನಿಯೋಜಿತ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.