ಚುನಾವಣಾ ವೆಚ್ಚ:ದಾಖಲೆ ಸಮೇತ ಮಾಹಿತಿ ನೀಡಲು ಸೂಚನೆ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 26 :-   ಕ್ಷೇತ್ರದಲ್ಲಿ  ವಿಧಾನಸಭಾ ಚುನಾವಣೆ ನ್ಯಾಯಸಮ್ಮತವಾಗಿ ನಡೆಯಲು ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು. ಅಲ್ಲದೆ, ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಾಹಿತಿ ಜೊತೆಗೆ ಅದರ  ದಾಖಲೆಗಳನ್ನು  ಏ.27, ಮೇ 2 ಮತ್ತು 7ರಂದು ನಡೆಯುವ ಪರಿಶೀಲನೆಯಲ್ಲಿ ಕಡ್ಡಾಯವಾಗಿ ಒದಗಿಸಬೇಕು ಎಂದು ಕ್ಷೇತ್ರದ ಚುನಾವಣಾ ವೀಕ್ಷಕ ತಮಿಳುನಾಡಿನ ಶಿವಜ್ಞಾನಮ್ ತಿಳಿಸಿದರು.
ಮಂಗಳವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿನ ಚುನಾವಣಾಧಿಕಾರಿ ಕಚೇರಿಯಲ್ಲಿ ನಡೆದ ನಾನಾ ಪಕ್ಷಗಳ ಅಭ್ಯರ್ಥಿಗಳು ಹಾಗೂ ಏಜೆಂಟರ ಸಭೆಯಲ್ಲಿ ಮಾತನಾಡಿದರು. ಮತದಾನ ಕೇಂದ್ರಗಳಿಗೆ ಕೊಂಡೊಯ್ಯುವ ಇವಿಎಂ ಯಂತ್ರಗಳ ಸೆಟ್ಟಿಂಗ್ ಮತ್ತು ಸೀಲಿಂಗ್ ಸಮಯದಲ್ಲಿ ಅಭ್ಯರ್ಥಿಗಳು ಅಥವಾ ಅವರಿಗೆ ಸಂಬಂಧಿಸಿದ ಏಜೆಂಟರು ಕಡ್ಡಾಯವಾಗಿ ಹಾಜರಿರಬೇಕು. ಚುನಾವಣಾ ಪ್ರಚಾರ ಸಭೆಗಳಿಗೆ  ಚುನಾವಣಾ ಅಧಿಕಾರಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನೀತಿ ಸಂಹಿತೆ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಈರಣ್ಣ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಇಒ ವೈ.ರವಿಕುಮಾರ್, ಚುನಾವಣಾ ನೋಡಲ್ ಅಧಿಕಾರಿಗಳಾದ  ಜಗದೀಶ್ ಚಂದ್ರ ಭೋಸ್,  ನಾಗರಾಜ ಕೊಟ್ರಪ್ಪಗಳ , ಸಿಬ್ಬಂದಿ ಶಿವಕುಮಾರ,  ಈಶಪ್ಪ, ಕೊಟ್ರೇಶ ಹಾಗೂ ನಾನಾ ಪಕ್ಷಗಳ ಅಭ್ಯರ್ಥಿಗಳು, ಏಜೆಂಟರು ಹಾಜರಿದ್ದರು.