ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಮತಯಂತ್ರಗಳ ಎರಡನೇ ರ್ಯಾಂಡಾಮಿಜೇಶನ್

ಬೀದರ ಏ 06: 47-ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತ ಯಂತ್ರಗಳಿಗೆ ಸಂಬಂಧಿಸಿದ ಎರಡನೇ ಹಂತದ ರ್ಯಾಂಡಾಮಿಜೇಶನ್ ಪ್ರಕ್ರಿಯೆಯು ಸಾಮಾನ್ಯ ಚುನಾವಣಾ ವೀಕ್ಷಕರಾದ ಅಲೋಕ್ ಗುಪ್ತ ಅವರ ಸಮ್ಮುಖದಲ್ಲಿ ಏಪ್ರೀಲ್ 5ರಂದು ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ನಡೆಯಿತು.
ಉಪ ಚುನಾವಣೆ ಹಿನ್ನೆಲೆಯಲ್ಲಿ 264 ಮತಗಟ್ಟೆಗಳು ಮತ್ತು ಹೆಚ್ಚುವರಿ 62 ಮತಗಟ್ಟೆಗಳು ಸೇರಿ ಒಟ್ಟು 326 ಮತಗಟ್ಟೆಗಳೆಂದು ಗುರುತಿಸಲಾಗಿದೆ. ಯಾವ ಮತಗಟ್ಟೆಗೆ ಯಾವ ಬ್ಯಾಲೆಟ್ ಯುನಿಟ್, ಯಾವ ಕಂಟ್ರೋಲ್ ಯುನಿಟ್, ವಿವಿಪ್ಯಾಟ್ ಅನ್ನುವುದಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ರ್ಯಾಂಡಾಮಿಜೇಶನ್ ಪ್ರಕ್ರಿಯೆ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು, ರ್ಯಾಂಡಾಮಿಜೇಷನ್ ಬಳಿಕ ತೆಗೆದುಕೊಂಡ ಪ್ರತಿಗಳಿಗೆ ಸಾಮಾನ್ಯ ಚುನಾವಣಾ ವೀಕ್ಷಕರಿಂದ ಅನುಮೋದನೆ ಸಿಕ್ಕಿದೆ. ಈ ಪ್ರತಿಗಳನ್ನು ಚುನಾವಣೆಯಲ್ಲಿ ಅಂತಿಮ ಕಣದಲ್ಲಿರುವ 12 ಜನ ಅಭ್ಯರ್ಥಿಗಳಿಗೆ ಜಾರಿಗೊಳಿಸಬೇಕು. ಜೊತೆಗೆ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಇದನ್ನು ತಲುಪಿಸಿದ ಬಗ್ಗೆ ಸ್ವೀಕೃತ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ತಹಸೀಲ್ದಾರ ಮತ್ತು ಸಹಾಯಕ ಚುನಾವಣಾಧಿಕಾರಿಗಳಾದ ನಾಗಯ್ಯ ಹಿರೇಮಠ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಚುನಾವಣಾ ವಿಭಾಗದ ತಹಸೀಲ್ದಾರ ಶಾಂತನು ಪೂರಂ ಹಾಗೂ ಇತರರು ಇದ್ದರು.