ಚುನಾವಣಾ ವರದಿಗಾರಿಕೆ; ಮಾಧ್ಯಮ ನೀತಿ ಸಂಹಿತೆಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸಿ: ತಗಡೂರು

ಕಲಬುರಗಿ,ಏ 16: ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವರದಿಗಾರರು ಸಾಮಾಜಿಕ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಿವಿಮಾತು ಹೇಳಿದರು.
ಕಲಬುರಗಿಯ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ‘ಚುನಾವಣಾ ವರದಿಗಾರಿಕೆ; ಮಾಧ್ಯಮ ನೀತಿ ಸಂಹಿತೆ’ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವುದರ ಜೊತೆಗೆ ವೃತ್ತಿ ದ್ರೋಹಕ್ಕೆ ಎಲ್ಲಿಯೂ ಅವಕಾಶ ಇಲ್ಕದಂತೆ ಎಚ್ಚರ ವಹಿಸಲು ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಚುನಾವಣೆಯ ಸಂದರ್ಭದಲ್ಲಿ ಯಾವುದೇ ಉಮೇದುವಾರನ ಪರವಾಗಿ ಜಾಹೀರಾತು ಪ್ರಕಟಿಸುವುದಾಗಲಿ, ಪಾವತಿ ಸುದ್ದಿಗಳನ್ನು ( ಪೇಯ್ಡ್ ನ್ಯೂಸ್) ಪ್ರಕಟಿಸುವುದಾಗಲಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ಹೆಚ್ಚು ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದರು.ವರದಿಗಾರಿಕೆಯ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೆ ಸ್ಥಿತಪ್ರಜ್ಞರಾಗಿ, ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ತಗಡೂರ್ ಆಪ್ತ ಸಲಹೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಅಜಮಾಡು ರಮೇಶ್ ಕುಟ್ಟಪ್ಪ ಮಾತನಾಡಿದರು.
ರಾಜ್ಯ ಸಂಘದ ಕಾರ್ಯದರ್ಶಿ ಮತ್ತಿಕೆರೆ ಜಯರಾಂ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ್, ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ವೇದಿಕೆಯಲಿದ್ದರು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಬಡಿಗೇರ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ದೇವೀಂದ್ರಪ್ಪ ಅವಂಟಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಸುಭಾಷ್ ಬಣಗಾರ್ ವಂದಿಸಿದರು.