ಚುನಾವಣಾ ಯಶಸ್ಸು ಮತಗಟ್ಟೆ ಅಧಿಕಾರಿಗಳ ಮೇಲಿದೆ; ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ


 ದಾವಣಗೆರೆ ಏ.11; ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತ ಅಂದರೆ ರಾಜ್ಯದ ಎರಡನೇ ಹಂತದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಮತದಾನ ದಿನ ಸುಗಮವಾಗಿ ಮತದಾನವಾಗಲು ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿಗಳ ಪಾತ್ರ ಬಹಳ ಪ್ರಮುಖವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು. ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಆರ್‍ಓ, ಎಪಿಆರ್‍ಓಗಳಿಗೆ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಲಾದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಮತಗಟ್ಟೆ ಅಧಿಕಾರಿಗಳು ಮತದಾನದ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬೇಕು. ನಿಮಗೆ ಸಮಸ್ಯೆಯಾಗಂತೆ ಮಾರ್ಗದರ್ಶನಕ್ಕಾಗಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತರಬೇತಿ ಜೊತೆಗೆ ನಿಮಗೆ ಕೊಡಲಾದ ಮಾರ್ಗಸೂಚಿ ಕೈಪಿಡಿಯನ್ನು ಸಂಪೂರ್ಣವಾಗಿ ಅವಲೋಕಿಸಿ ತಿಳಿದುಕೊಂಡು ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು.ಮತದಾನ ದಿನ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡದೇ ಸಮಯಕ್ಕೆ ಸರಿಯಾಗಿ ಮತದಾನ ಪ್ರಾರಂಭ ಮಾಡಲು ಕ್ರಮ ವಹಿಸಬೇಕು. ಅಣಕು ಮತದಾನವನ್ನು ನಿಗದಿತ ಸಮಯದಲ್ಲಿ ಮುಕ್ತಾಯ ಮಾಡಿ, ಅದರ ಫಲಿತಾಂಶವನ್ನು ಕ್ಲಿಯರ್ ಮಾಡಿದ ನಂತರವೇ ವಾಸ್ತವ ಮತದಾನ ಆರಂಭಿಸಬೇಕು. ಯಾರು ಸಹ ಗೊಂದಲಗಳಿಗೆ ಅವಕಾಶ ಮಾಡಿಕೊಡದೇ ಸಮಾಧಾನವಾಗಿ ಹಾಗೂ ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.