ದಾವಣಗೆರೆ.ಜೂ.೧೪: ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಹಲವು ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ, ದಾವಣಗೆರೆ ಜಿಲ್ಲಾ ಮಂಡಳಿಯು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.ಈ ವೇಳೆ ಮಾತನಾಡಿದ ಆವರಗೆರೆ ಹೆಚ್.ಜಿ.ಉಮೆಶ್, ರೈತರಿಗೆ ಮಾರಕವಾಗಿರುವ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಲು ಅಗತ್ಯ ಸುಗ್ರಿವಾಜ್ಞೆ ಹೊರಡಿಸಬೇಕು. ಕೃಷಿ ಪಂಪುಸೆಟ್ಟುಗಳಿಗೆ ಉಚಿತ ವಿದ್ಯುತ್, ಬಳಕೆ ಮಿತಿ ಹೇರಿಕೆ ಮಾಡಬೇಕು. ಕೃಷಿಗೆ ಬಡ್ಡಿ ರಹಿತ ಸಾಲ ನೀಡಬೇಕು. ಬೆಂಬಲ ಬೆಲೆ ಮಾರುಕಟ್ಟೆ ವಿಸ್ತರಣೆಯಂತಹ ಭರವಸೆಗಳನ್ನು ಆದ್ಯತೆ ಮೇರೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಆದೇಶ ಹೊರಡಿಬೇಕೆಂದು ಆಗ್ರಹಿಸಿದರು.ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡಿರುವ ಭೂರಹಿತ ಸಾಗುವಳಿದಾರರಿಗೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡಬೇಕು. ರಾಜ್ಯದ ಸಣ್ಣ, ಅತಿಸಣ್ಣ ರೈತರ, ಕೃಷಿ ಕಾರ್ಮಿಕರು, ಕುಶಲ ಕಾರ್ಮಿಕರಿಗೆ ನಿವೇಶನ, ವಸತಿ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸಲು ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.ರಾಜ್ಯದ ಕಬ್ಬು, ಹತ್ತಿ, ತೊಗರಿ, ದಾಳಿಂಬೆ, ದ್ರಾಕ್ಷಿ, ಕಾಫಿ, ಕಾಳು ಮೆಣಸು, ಭತ್ತ, ರಾಗಿ, ಜೋಳ, ತರಕಾರಿ ಬೆಳೆಗಾರ ರೈತರಿಗೆ ಬೆಲೆ ಹಾಗೂ ಬೆಳೆ ನಷ್ಟದ ಸಂದರ್ಭದಲ್ಲಿ ಹವಾಮಾನ ವೈಪರಿತ್ಯ ಏರಿಳಿತದಂತಹ ವಿಶೇಷ ತೊಂದರೆಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡಬೇಕು. ಅಲ್ಲದೇ ಜಿಲ್ಲಾ ಮಟ್ಟದ ಸಭೆಯನ್ನು ಕಡ್ಡಾಯವಾಗಿ ಜಿಲ್ಲಾ ಮಂತ್ರಿಗಳು ನಡೆಸಬೇಕೆಂದರು.ಅಪೂರ್ಣಗೊಂಡಿರುವ ನೀರಾವರಿ ಯೋಜನೆಗಳ ಕಡೆ ಗಮನ ಹರಿಸಬೇಕು. ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸ್ಥಿರೀಕರಣ ನಿಧಿ ಮೀಸಲಿಡಬೇಕು. ಅಲ್ಲದೇ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಐರಣಿ ಚಂದ್ರು, ಭೀಮಾರೆಡ್ಡಿ, ಹಾಲೇಕಲ್ಲು ಸಿದ್ದಲಿಂಗಪ್ಪ, ಟಿ.ಎಸ್.ನಾಗರಾಜ್, ಕೆ.ಬಾನಪ್ಪ, ಎ.ಮರಿಯಪ್ಪ, ನರೇಗಾ ರಂಗನಾಥ್, ಕುಂದವಾಡದ ಚಂದ್ರಪ್ಪ, ಎ.ತಿಪ್ಪೇಶ್, ಟಿ.ಬಿ.ಮೂರ್ತಿ, ಹೆಚ್.ಪರಶುರಾಮ, ಸುರೇಶ್ ಯರಗುಂಟೆ, ಶಿವಕುಮಾರ್ ಡಿ.ಶೆಟ್ಟರ್, ದಾದಾಪೀರ್, ಪಿ.ಖಾದರ್, ಮಹಮ್ಮದ್ ರಫೀಕ್ ಇತರರು ಇದ್ದರು.