ಚುನಾವಣಾ ಬಾಂಡ್,ಬಿಜೆಪಿಗೆ ೧,೩೦೦ ಕೋಟಿ

ನವದೆಹಲಿ.ಫೆ.೧೧- ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಸುಮಾರು ೧,೩೦೦ ಕೋಟಿ ರೂ. ಸಂಗ್ರಹಿಸಿದ್ದು ಕಾಂಗ್ರೆಸ್ ಪಕ್ಷ ಪಡೆದುಕೊಂಡ ಮೊತ್ತಕ್ಕಿಂತ ಇದು ಏಳು ಪಟ್ಟು ಹೆಚ್ಚು ಎಂದು ತಿಳಿದುಬಂದಿದೆ.
೨೦೨೨-೨೩ರ ಆರ್ಥಿಕ ವರ್ಷದಲ್ಲಿ ಬಿಜೆಪಿಗೆ ಒಟ್ಟು ೨,೧೨೦ ಕೋಟಿ ರೂ. ದೇಣಿಗೆ ಹರಿದುಬಂದಿತ್ತು. ಇದರಲ್ಲಿ ಶೇ.೬೧ರಷ್ಟು ಚುನಾವಣಾ ಬಾಂಡ್‌ಗಳಿಂದ ಬಂದಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪಕ್ಷದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
೨೦೨೧-೨೨ರ ಹಣಕಾಸು ವರ್ಷದಲ್ಲಿ ಬಿಜೆಪಿಗೆ ಒಟ್ಟು ೧,೭೭೫ ಕೋಟಿ ರೂ. ದೇಣಿಗೆ ಬಂದಿತ್ತು. ೨೦೨೨-೨೩ರಲ್ಲಿ ಪಕ್ಷದ ಒಟ್ಟು ಆದಾಯ ೨೩೬೦.೮ ಕೋಟಿ ರೂ.ಗಳಾಗಿದ್ದು, ೨೦೨೧-೨೨ರ ಆರ್ಥಿಕ ವರ್ಷದಲ್ಲಿ ೧೯೧೭ ಕೋಟಿ ರೂಪಾಯಿಯಷ್ಟಿತ್ತು. ಮತ್ತೊಂದೆಡೆ, ಕಾಂಗ್ರೆಸ್ ಚುನಾವಣಾ ಬಾಂಡ್‌ಗಳಿಂದ ರೂ ೧೭೧ ಕೋಟಿ ರೂಪಾಯಿ ಬಡ್ಡಿ ಲಭಿಸಿದ್ದು, ಇದು ೨೦೨೧-೨೨ರ ಆರ್ಥಿಕ ವರ್ಷದಲ್ಲಿ ೨೩೬ ಕೋಟಿ ರೂಪಾಯಿಗಿಂತ ಕಡಿಮೆಯಾಗಿದೆ.
ಸಮಾಜವಾದಿ ಪಕ್ಷ ೨೦೨೧-೨೨ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ೩.೨ ಕೋಟಿ ರೂಪಾಯಿ ಗಳಿಸಿತ್ತು. ೨೦೨೨-೨೩ರಲ್ಲಿ, ಇದು ಈ ಬಾಂಡ್‌ಗಳಿಂದ ಯಾವುದೇ ದೇಣಿಗೆ ಸ್ವೀಕರಿಸಿಲ್ಲ. ಟಿಡಿಪಿ ೨೦೨೨-೨೩ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ೩೪ ಕೋಟಿ ರೂ ದೇಣಿಗೆ ಗಳಿಸಿದೆ, ಇದು ಹಿಂದಿನ ಹಣಕಾಸು ವರ್ಷಕ್ಕಿಂತ ೧೦ ಪಟ್ಟು ಹೆಚ್ಚಾಗಿದೆ.