ಚುನಾವಣಾ ಪ್ರಯುಕ್ತ ಸಿ.ಆರ್.ಪಿ.ಎಫ್ ಯೋಧರಿಗೆ ಆರೋಗ್ಯ ತಪಾಸಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.04: ಚುನಾವಣೆ ಕಾರ್ಯ ನಿಮಿತ್ತ ಅಸ್ಸಾಂ ಹಾಗೂ ತೆಲಂಗಾಣ ರಾಜ್ಯಗಳಿಂದ ಸಿರುಗುಪ್ಪ ಹಾಗೂ ತೆಕ್ಕಲಕೋಟೆಗೆ ಬಂದಿರುವ ಸಿ.ಆರ್.ಪಿ.ಎಫ್ ಯೋಧರಿಗೆ ಬುಧವಾರ ಸಂಜೆ ಮಲೇರಿಯಾ ಹಾಗೂ ಫಿಲೇರಿಯ ರಕ್ತ ಪರೀಕ್ಷೆ ಮಾಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬಳ್ಳಾರಿ ವತಿಯಿಂದ ಹಾಗೂ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳ ಆದೇಶದ ಮೇರೆಗೆ ಸಮುದಾಯ ಆರೋಗ್ಯ ಕೇಂದ್ರ ತೆಕ್ಕಲಕೋಟೆ ವತಿಯಿಂದ  ಸಿ.ಆರ್.ಪಿ.ಎಫ್ ಸಿಬ್ಬಂದಿಗಳಿಗೆ ಮಲೇರಿಯ ಮತ್ತು ಫೈಲೇರಿಯ  ರಕ್ತ ಲೇಪನಗಳ ಮಾದರಿ ಸಂಗ್ರಹಿಸಲಾಯಿತು ಹಾಗೂ ಬಿ.ಎಚ್.ಇ.ಒ ಮಹಮದ್ ಕಾಸಿಂ ರವರು ಸೊಳ್ಳೆಗಳು ರೋಗವಾಹಕ ಕೀಟಗಳಾಗಿದ್ದು ಸೊಳ್ಳೆಗಳಿಂದ  ಮಲೇರಿಯ ಪೈಲೇರಿಯಾ ಮೆದುಳು ಜ್ವರ ಮತ್ತು ಡೆಂಗ್ಯು ಹಾಗೂ ಚಿಕನ್ ಗುನ್ಯಾ ಜ್ವರ ಹರಡುತ್ತವೆ, ಸಾಮಾನ್ಯವಾಗಿ ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿಯನ್ನು ಹೆಚ್ಚಿಸುತ್ತವೆ. ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತೆ ಪ್ರೌಢಾವಸ್ಥೆಯ ಸೊಳ್ಳೆ ಜೀವನ ಚಕ್ರ ಹೊಂದಿದ್ದು, ಒಂದು ತಿಂಗಳ ಜೀವಿತಾವಧಿಯಲ್ಲಿ ಸರಿಸುಮಾರು 600 ರಿಂದ 800 ಮೊಟ್ಟೆಗಳನ್ನಿಡುತ್ತವೆ.
ಇಂದು ಮಲೇರಿಯ ಮತ್ತು ಫೈಲೇರಿಯ ರಕ್ತ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ, ಸೊಳ್ಳೆಗಳು ಪ್ಯಾರಾಸೈಟ್ ನಿಂದ ಸೋಂಕಿತಗೊಂಡು ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಾಗ ವಿಪರೀತ ಜ್ವರ, ವಿಪರೀತ ಚಳಿ, ತಲೆನೋವು ಬೆವರು ಸುಸ್ತು ವಾಂತಿ ಮಲೇರಿಯದ ಲಕ್ಷಣಗಳಾಗಿವೆ. ಜ್ವರ ಬಂದು ಕೆಲ ದಿನಗಳ ನಂತರ ಕಾಲುಗಳಲ್ಲಿ ಬಾವು ವೃಷಣಗಳಲ್ಲಿ ಬಾವು ಬರುವುದರಿಂದ ಆನೇಕಾಲು ರೋಗ ಅಂದರೆ ಫೈಲೇರಿಯಾ ಹರಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು. ವಿವಿಧ ರಾಜ್ಯಗಳಿಂದ ಚುನಾವಣಾ ಪ್ರಯುಕ್ತ ಬಂದಿರುವಂತಹ ಸಿ.ಆರ್.ಪಿ.ಎಫ್ ಯೋಧರಿಗೆ ಮುಂಜಾಗ್ರತಾ ಕ್ರಮವಾಗಿ ರಕ್ತ ಲೇಪನ ಮಾದರಿಗಳನ್ನು ಸಂಗ್ರಹಿಸಿ ಮತ್ತು ಎಲ್ಲಾ ಯೋಧರ ತಮ್ಮ ವಿವರವನ್ನು ಪಡೆದು ರಕ್ತ ಮಾದರಿ ಸಂಗ್ರಹಿಸಲಾಯಿತು.
 ಈ ಸಂದರ್ಭದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಈರಣ್ಣ ಸರ್ ಅವರು ಆಗಮಿಸಿ ಯೋಧರು ಯಾವುದೇ ರೀತಿಯ ಜ್ವರ ಬಂದರೆ ಸಮೀಪದ ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಉಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು,
ಒಟ್ಟು 75 ಯೋಧರಲ್ಲಿ 73 ಯೋಧರ ಮಲೇರಿಯಾ ಮತ್ತು ಫೈಲೇರಿಯಾ ರಕ್ತ ಮಾದರಿಗಳನ್ನು ಸಂಗ್ರಹಿಸಿದರು, ಯೋಧರು ಕರ್ತವ್ಯದಿಂದ ಮರಳಿ ಬಂದಿದ್ದಾರೆ ಆದಷ್ಟು ಬೇಗ ಅವರಿಗೆ ತೊಂದರೆಯಾಗದಂತೆ ಕೆಲಸವನ್ನು ನಿರ್ವಹಿಸಲು ಸಿಬ್ಬಂದಿಗಳಿಗೆ ತಿಳಿಸಿದರು.
 ಕಾಸಯ್ಯ ಸಿ ಆರ್ ಪಿ ಎಫ್ ದ್ವಿತೀಯ ದರ್ಜೆಯ ಮೇಲಾಧಿಕಾರಿ ಎಲ್ಲ ಯೋಧರನ್ನು ಶಿಸ್ತಾಗಿ ರಕ್ತ ಲೇಪನಗಳನ್ನು ಪಡೆಯುವಲ್ಲಿ ಸಂಪೂರ್ಣ ಸಹಕಾರ ನೀಡಿದರು.
 ಈ ಸಂದರ್ಭದಲ್ಲಿ  ವಿಜಯಕುಮಾರ್ ಎಚ್.ಐ.ಒ, ವಿಜಯಲಕ್ಷ್ಮಿ ಸಿ.ಎಚ್.ಒ  ಡಿ ರತ್ನಮ್ಮ, ಕುಮಾರಿ ಅರುಣ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.