ಚುನಾವಣಾ ಪ್ರಚಾರ ಬಿರುಸು

ರಾಹುಲ್, ಎಚ್‌ಡಿಡಿ ಅಬ್ಬರ
ಬೆಂಗಳೂರು,ಏ.೨೮:ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎಲ್ಲೆಡೆ ಅಬ್ಬರದ ಪ್ರಚಾರ ನಡೆದಿದ್ದು, ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಅಬ್ಬರದ ಪ್ರಚಾರದಲ್ಲಿ ಸಕ್ರಿಯವಾಗಿದ್ದು, ನಾಳೆ ಪ್ರಧಾನಿ ಮೋದಿ ಅವರು ಮತಬೇಟೆಗಾಗಿ ರಾಜ್ಯಕ್ಕೆ ಆಗಮಿಸಲಿದ್ದು, ಚುನಾವಣಾ ಕಣ ಮತ್ತಷ್ಟು ಕಳೆಗಟ್ಟಲಿದ್ದು, ಪ್ರಚಾರದ ಕಾವು ತಾರಕಕ್ಕೇರಲಿದೆ.
ಚುನಾವಣೆಗೆ ಇನ್ನು ೧೨ ದಿನಗಳಷ್ಟೆ ಬಾಕಿ ಇದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗಳು ಅಬ್ಬರದ ಪ್ರಚಾರ ನಡೆಸಿದ್ದು, ಈ ಮೂರೂ ಪಕ್ಷಗಳ ಘಟಾನುಘಟಿ ನಾಯಕರುಗಳು ರಾಜ್ಯಾದ್ಯಂತ ಚುನಾವಣಾ ಪ್ರಚಾರಕ್ಕೆ ಕಾವು ತುಂಬಿದ್ದಾರೆ.
ಕಳೆದ ಮೂರು ದಿನಗಳಿಂದ ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಉತ್ತರ ಕರ್ನಾಟಕ ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು, ಈ ಪ್ರಚಾರಕ್ಕೆ ಸಡ್ಡು ಹೊಡೆಯುವಂತೆ ನಾಳೆ ಬಿಜೆಪಿ ಪ್ರಧಾನಿ ನರೇಂದ್ರಮೋದಿ ಅವರ ಮೂಲಕ ಮತಬೇಟೆ ನಡೆಸಲಿದೆ.
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರಮೋದಿ ಅವರು ಮತಶಿಕಾರಿಗೆ ಆಗಮಿಸುತ್ತಿದ್ದು, ನಾಳೆ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ, ರಾಜಧಾನಿ ಬೆಂಗಳೂರು ಹಾಗೂ ಹಳೇ ಮೈಸೂರು ಭಾಗದಲ್ಲಿ ಅಬ್ಬರದ ಪ್ರಚಾರ, ರೋಡ್ ಶೋ ನಡೆಸುವರು. ಈ ಅಬ್ಬರದ ಪ್ರಚಾರ ನಡೆಸುವ ಮೂಲಕ ಪ್ರಧಾನಿ ಮೋದಿ ಅವರು ಬಿಜೆಪಿಯ ಚುನಾವಣೆಯ ಪ್ರಚಾರಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.
ಕಾಂಗ್ರೆಸ್ ಪರ ಈಗಾಗಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್‌ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇವರುಗಳು ರಾಜ್ಯದೆಲ್ಲೆಡೆ ಬಿರುಸಿನ ಪ್ರಚಾರ ನಡೆಸಿದ್ದು, ಕಾಂಗ್ರೆಸ್‌ನ ಪ್ರಚಾರದ ಪ್ರಮುಖ ಆಕರ್ಷಣೆಯಾಗಿ ರಾಹುಲ್‌ಗಾಂಧಿ ಅವರು ಪ್ರಚಾರನಿರತರಾಗಿದ್ದಾರೆ.
ಜೆಡಿಎಸ್ ಪಕ್ಷವು ಬಿರುಸಿನ ಪ್ರಚಾರ ನಡೆಸಿದ್ದು, ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ ಪರ ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಹಲವೆಡೆ ಅಬ್ಬರದ ಪ್ರಚಾರ ನಡೆಸಿದ್ದಾರೆ. ಹಾಗೆಯೇ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಜೆಡಿಎಸ್ ಪರ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಇದರೆಲ್ಲದರ ಮಧ್ಯೆಯೇ ನಾಳೆಯಿಂದ ಎರಡು ದಿನಗಳ ಕಾಲ ಪ್ರಧಾನಿ ಮೋದಿ ಅವರು ನಾಳೆ ಬೀದರ್‌ನ ಹುಮ್ನಾಬಾದ್, ವಿಜಯಪುರ, ಬೆಳಗಾವಿಯ ಕುಡಚಿಯಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿ, ನಾಳೆ ಸಂಜೆ ಬೆಂಗಳೂರಿನ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿಯ ಜಂಕ್ಷನ್‌ವರೆಗೆ ರೋಡ್ ಶೋ ನಡೆಸುವರು.
ಏ. ೩೦ ರಂದು ಪ್ರಧಾನಿ ಅವರು ಕೋಲಾರದಲ್ಲಿ ೨ ಪ್ರಚಾರ ಸಭೆಗಳಲ್ಲಿ ಭಾಗಿಯಾಗುವರು. ಹಾಗೆಯೇ, ಏ. ೩೦ರ ಸಂಜೆ ಹಾಸನ ಜಿಲ್ಲೆ ಬೇಲೂರಿನಲ್ಲೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಅದೇ ದಿನ ಸಂಜೆ ಮೈಸೂರಿನಲ್ಲಿ ರೋಡ್ ಶೋ ನಡೆಸಿ ಬಿಜೆಪಿಯ ಪ್ರಚಾರಕ್ಕೆ ಬಲ ತುಂಬಲಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರುಗಳಾದ ಅಮಿತ್ ಶಾ, ಸ್ಮೃತಿ ಇರಾನಿ ಸೇರಿದಂತೆ ಹಲವು ಕೇಂದ್ರ ಸಚಿವರುಗಳು, ಬಿಜೆಪಿ ಆಡಳಿತದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಈಗಾಗಲೇ ರಾಜ್ಯದಲ್ಲಿ ಪ್ರಚಾರ ನಡೆಸಿದ್ದು, ಪ್ರಧಾನಿ ಮೋದಿ ಅವರ ಪ್ರಚಾರದಿಂದ ರಾಜ್ಯದ ಪ್ರಚಾರದ ಕಾವು ಮತ್ತಷ್ಟು ಬಿರುಸಾಗಲಿದೆ.

ಮೋದಿ ರೋಡ್ ಶೋ
ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಾಂಕ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತಬೇಟೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ವಿವಿಧೆಡೆ ಪ್ರಚಾರ ನಡೆಸಿ ನಾಳೆ ಸಂಜೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ. ಇದಕ್ಕಾಗಿ ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
ಬೆಂಗಳೂರು ಉತ್ತರದ ಮೂರು ವಿಧಾನಸಭಾ ಕ್ಷೇತ್ರದ ೧೦ ಕಿಲೋ ಮೀಟರ್‌ಗೆ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ. ಸುಮಾರು ೪೫ ನಿಮಿಷಗಳ ಕಾಲ ಕ್ರಮಿಸಲಿದ್ದಾರೆ.
ಮೋದಿಯವರ ಪ್ರಚಾರಕ್ಕಾಗಿ ಈಗಾಗಲೇ ದೆಹಲಿಯಿಂದ ಬುಲೆಟ್ ಪ್ರೂಫ್ ವಾಹನ ಸಜ್ಜುಗೊಂಡಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ ನಂತರ ಇದೇ ಬುಲೆಟ್ ಪ್ರೂಫ್ ವಾಹನದಲ್ಲಿ ಮೈಸೂರಿನಲ್ಲೂ ರೋಡ್ ಶೋ ನಡೆಸಲಿದ್ದಾರೆ. ಇದಲ್ಲದೆ ಸಾರ್ವಜನಿಕ ಸಮಾವೇಶಗಳಲ್ಲೂ ಭಾಗವಹಿಸಿ ಮತಬೇಟೆ ನಡೆಸಲಿದ್ದಾರೆ.