ಚುನಾವಣಾ ಪ್ರಚಾರದಲ್ಲಿ ಭಾಗಿ:ವಾರ್ಡನ್ ಅಮಾನತ್ತು ಮಾಡಿ ಡಿ.ಸಿ. ಆದೇಶ

ಕಲಬುರಗಿ,ಏ.5: ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಕಾರಣ ಸಮಾಜ ಕಲ್ಯಾಣ ಇಲಾಖೆಯ ಸೇಡಂ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ವಸತಿ ನಿಲಯದ ವಾರ್ಡನ್ ಯಶೋಧಮ್ಮ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಿ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.

ಸೇಡಂ ತಾಲೂಕಿನ ಮಳಖೇಡ್ ಆದಿತ್ಯಾ ಕಾಲೋನಿಯಲ್ಲಿ ಕಳೆದ ಮಾರ್ಚ್ 21 ರಂದು ರಾಜಕೀಯ ಪಕ್ಷದ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು, ಸರಕಾರಿ ನೌಕರರ ತರವಲ್ಲದ ರೀತಿಯಲ್ಲಿ ನಡೆದುಕೊಂಡು, ಸರಕಾರಿ ಆದೇಶವನ್ನು ಉಲ್ಲಂಘಿಸಿ ಕೆಲಸದಲ್ಲಿ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನ ತೋರಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಚುನಾವಣಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ ಎಂದು ಸೇಡಂ ವಿಧಾನಸಭಾ ಮತಕ್ಷೇತ್ರದ‌ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರ ವರದಿ ಹಿನ್ನೆಲೆಯಲ್ಲಿ ಯಶೋದಮ್ಮ ಅವರನ್ನು ಪ್ರಜಾಪ್ರತಿನಿಧಿ ಕಾಯ್ದೆ-1951, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957 ಹಾಗೂ ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮಗಳು-2021 ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸದರಿಯವರನ್ನು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.

ರಾಜಕೀಯದಲ್ಲಿ ಭಾಗಿಯಾದರೆ ನಿರ್ದಾಕ್ಷಿಣ್ಯ ಕ್ರಮ:ಸರ್ಕಾರಿ ನೌಕರರು ಜಿಲ್ಲೆಯಲ್ಲಿ ಈ ರೀತಿಯಾಗಿ ಸರ್ಕಾರಿ ಕೆಲಸವಲ್ಲದ ರಾಜಕೀಯ ಪಕ್ಷಗಳ ಚುನಾವಣಾ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಕಂಡುಬಂದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಸಿ. ಯಶವಂತ ವಿ. ಗುರುಕರ್ ಅವರು ಎಚ್ಚರಿಕೆ ನೀಡಿದ್ದಾರೆ.