ಬಳ್ಳಾರಿ,ಏ.17- ಚುನಾವಣೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗಳು ಚುನಾವಣೆಯ ಮಾರ್ಗಸೂಚಿ ಹಾಗೂ ನಿಯಮಗಳನ್ನು ಅರಿತುಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಹೇಮಂತ್‍ಕುಮಾರ್.ಎನ್ ಅವರು ಸೂಚನೆ ನೀಡಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾನುವಾರ ಬಳ್ಳಾರಿ ಗ್ರಾಮಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಮತಗಟ್ಟೆ ಕೇಂದ್ರಗಳಿಗೆ ನಿಯೋಜಿಸಿದ ಪಿಒ, ಎಪಿಆರ್‍ಒ ಅಧಿಕಾರಿ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚುನಾವಣೆ ಆಯೋಗವು ಮತದಾನ ಸಂದರ್ಭದಲ್ಲಿ ಮತಯಂತ್ರಗಳಲ್ಲಿ ಯಾವುದೇ ಸಮಸ್ಯೆಗಳು ಉಂಟಾಗಬಾರದೆಂದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಆದಾಗ್ಯೂ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಸೆಕ್ಟರ್ ಅಧಿಕಾರಿಗಳು ಮತ್ತು ಬೂತ್ ಲೆವೆಲ್ ಅಧಿಕಾರಿಗಳ ಗಮನಕ್ಕೆ ತಕ್ಷಣ ತರಬೇಕು ಎಂದರು.
ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ರ್ಯಾಂಪ್ ಫ್ಯಾನ್ ಒಳಗೊಂಡಂತೆ ಕನಿಷ್ಠ ಮೂಲಭೂತ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಮತದಾನದ ಸಂದರ್ಭದಲ್ಲಿ ಮತಗಟ್ಟೆಯ ಅಧಿಕಾರಿ, ಸಿಬ್ಬಂದಿಗಳು ಯಾವ ಯಾವ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.
ತರಬೇತಿಯಲ್ಲಿ ಪಿಒ, ಎಪಿಆರ್‍ಒ ಅಧಿಕಾರಿ ಸಿಬ್ಬಂದಿಗಳಿಗೆ ಮತಯಂತ್ರಗಳನ್ನು ಟ್ಯಾಗ್ ಮತ್ತು ಸೀಲ್ ಹೇಗೆ ಮಾಡಬೇಕೆನ್ನುವುದರ ಬಗ್ಗೆ ಪ್ರಾತ್ಯಕ್ಷಿಕೆಯಲ್ಲಿ ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಡಿಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಸಿಬ್ಬಂದಿಗಳು ಸೇರಿದಂತೆ ತರಬೇತಿಯಲ್ಲಿ ಪಿಒ, ಎಪಿಆರ್‍ಒ ಅಧಿಕಾರಿ ಸಿಬ್ಬಂದಿಗಳು ಇದ್ದರು