ಚುನಾವಣಾ ಪೂರ್ವಸಿದ್ದತೆಯ ತಯಾರಿ

ಸಂಜೆವಾಣಿ ವಾರ್ತೆ
ಸಿರುಗುಪ್ಪ ಡಿ 03 : ಡಿ.10ರಂದು ನಡೆಯುವ ವಿಧಾನಪರಿಷತ್ ಚುನಾವಣೆಯ ಪೂರ್ವಸಿದ್ದತೆಯಲ್ಲಿ ತಾಲೂಕು ಆಡಳಿತದಿಂದ ಸಕಲ ಸಿದ್ದತೆ ಕೈಗೊಳ್ಳುತ್ತಿರುವುದಾಗಿ ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ತಿಳಿಸಿದರು.
    ನಗರದ ತಾಲೂಕು ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಜನಪ್ರತಿನಿಧಿಗಳೇ ಮತದಾನದ ಮೂಲಕ ಆಯ್ಕೆ ಮಾಡುತ್ತಿರುವುದರಿಂದ 27 ಗ್ರಾಮ ಪಂಚಾಯಿತಿಗಳು, 1 ಪಟ್ಟಣ ಪಂಚಾಯಿತಿ, 1 ನಗರಸಭೆ ಸೇರಿದಂತೆ ಒಟ್ಟು 29 ಮತಗಟ್ಟೆಗಳನ್ನು ಆಯಾ ಕಛೇರಿಗಳಲ್ಲೇ ಸೂಚಿಸಲಾಗಿದ್ದು, ಮತಗಟ್ಟೆಯ ಅವಶ್ಯಕವಾಗಿ ಬೇಕಾಗುವ ರ್ಯಾಂಪ್, ಎಲೆಕ್ಟ್ರಾನಿಕ್, ಸುಸಜ್ಜಿತ ಕೊಠಡಿಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಆಯಾ ಸೆಕ್ಟರ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    ಈ ಬಾರಿ ಮತದಾನ ಮಾಡುವ ಮತದಾರರು ಪ್ರಾಶಸ್ತ್ಯದ ಮತದಾನ ಮಾಡುವ ಕುರಿತು ಆಯಾ ಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳಿಂದ ಪ್ರಾಶಸ್ತ್ಯ ಮತದಾನದ ತರಬೇತಿ ಕೊಡಿಸಲಾಗುವುದು.
        ಈಗಾಗಲೇ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಪಿ.ಆರ್.ಓ ಮತ್ತು ಎ.ಪಿ.ಆರ್.ಓಗಳ ಸಿಬ್ಬಂದಿಗಳಿಗೆ ಚುನಾವಣಾ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದೆ, ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು, ಜನಪ್ರತಿನಿಧಿ ಮತದಾರರನ್ನು ಗುರುತಿಸಲು ಪಿ.ಡಿ.ಓ, ಕೋವಿಡ್ ತಪಾಸಣೆಗಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಪೋಲೀಸ್ ಸಿಬ್ಬಂದಿಯನ್ನು ನೇಮಿಸಲಾಗುವುದು.   
    ಕೋವಿಡ್ ಸುರಕ್ಷತಾ ಮಾರ್ಗಸೂಚಿಗಳ ಅನ್ವಯ ಎಲ್ಲಾ ಮತಗಟ್ಟೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೋವಿಡ್ ನಿರೋಧಕ ಎರಡು ಲಸಿಕೆಗಳನ್ನು ಕಡ್ಡಾಯವಾಗಿ ಪಡೆದಿರುವವರನ್ನು ಮಾತ್ರ ನೇಮಿಸಲಾಗುವುದು, ಇನ್ನೂ ಮತದಾರರು ಒಂದು ಲಸಿಕೆ ಪಡೆದಿದ್ದಲ್ಲಿ ಬಾಕಿಯಿರುವ ಎರಡನೇ ಲಸಿಕೆಯನ್ನು ಮತಗಟ್ಟೆಯ ಕೇಂದ್ರದ ಆವರಣದಲ್ಲಿ ಹಾಕಿಸಲಾಗುತ್ತದೆ.
      ನಮ್ಮ ವ್ಯಾಪ್ತಿಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದು ಅನಗತ್ಯ ಚಟುವಟಿಕೆಗಳನ್ನು ನಿಯಂತ್ರಿಸಿ ಪಾರದರ್ಶಕ ಚುನಾವಣೆ ನಡೆಸಲಾಗುವುದೆಂದು ತಿಳಿಸಿದರು.