ಕೋಲಾರ,ಏ. ೧- ವಿಧಾನಸಭೆಯ ೨೦೨೩ರ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ೧೫೯೦ ಮತಗಟ್ಟೆಗಳಲ್ಲಿ ಮೇ.೧೩ರಂದು ಶಾಂತಿಯುತ ಮತದಾನ ಪ್ರಕ್ರಿಯೆ ನಡೆಯಲು ಅಗತ್ಯ ಕ್ರಮಕೈಗೊಂಡಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್‌ರಾಜಾ ತಿಳಿಸಿದರು.
ನಗರ ಹೊವರಲಯದ ಜಿಲ್ಲಾಡಳಿತ ಭವನದ ನ್ಯಾಯಾಂಗಣ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೬ ವಿಧಾನಸಭಾ ಕ್ಷೇತ್ರಗಳಲ್ಲಿನ ೧೫೯೦ ಮತಗಟ್ಟೆಗಳ ಪೈಕಿ ೩೯೨ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗು ವುದಾಗಿ ಹೇಳಿದರು.
ಜಿಲ್ಲೆಯಲ್ಲಿ ೧೨,೫೮,೯೯೫ ಮತದಾರ ರಿದ್ದು, ೬,೩೩,೧೯೨ ಮಹಿಳಾ ಮತದಾರರು, ೬,೨೫,೬೪೪ ಪುರುಷ ಮತದಾರರು, ೧೫೯ ಇತರೆ ಮತದಾರರಿದ್ದಾರೆ. ಒಟ್ಟು ಮತದಾರರ ಪೈಕಿ ೩೨,೦೧೪ ಯುವ ಮತದಾರರಿದ್ದು, ೮೦ ವರ್ಷಕ್ಕಿಂತ ಮೇಲ್ಪಟ್ಟ ೨೯,೩೩೮ ಮತದಾರರಿದ್ದರೆ, ೧೩,೭೦೯ ವಿಶೇಷಚೇತನ ಮತದಾರರು ಇದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ೫ ಪಿಂಕ್ ಬೂತ್‌ಗಳು ಇರುವುದಾಗಿ ತಿಳಿಸಿದರು.
ಮಾ.೨೯ರ ಬುಧವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ, ಏ.೧೪ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು, ಏ.೨೦ ನಾಮಪತ್ರ ಸ್ವೀಕೃತಿಯ ಕೊನೆಯ ದಿನಾಂಕ, ಏ.೨೧ ನಾಮಪತ್ರಗಳ ಪರಿಶೀಲನೆ, ಏ.೨೪ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕವಾಗಿದೆ. ಮೇ.೧೦ ಮತದಾನ ನಡೆಯಲಿದ್ದು, ಮೇ.೧೩ರಂದು ಮತ ಎಣಿಕೆ ನಡೆಯಲಿದೆ ಹಾಗೂ ಮೇ.೧೫ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದರು.
೨೫ ಚೆಕ್‌ಪೋಸ್ಟ್:
ಚುನಾವಣೆ ಹಿನ್ನೆಲೆಯಲ್ಲಿ ೧೭ ಅಂತರಾಜ್ಯ ಗಡಿ ಚೆಕ್‌ಪೋಸ್ಟ್‌ಗಳು ಸೇರಿದಂತೆ ಕೋಲಾರ, ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ೨೫ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ನಿಯಂತ್ರಣ ಕೊಠಡಿಗಳನ್ನು ಆರಂಭಿಸಲಾಗಿದ್ದು, ಯಾವುದೇ ದೂರು, ಮಾಹಿತಿಗಳಿದ್ದರೆ ಕರೆ ಮಾಡಿ ತಿಳಿಸಬಹುದಾಗಿದೆ.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ ೦೮೧೫೨-೧೯೫೦, ೦೮೧೫೨-೨೪೩೫೦೭, ಶ್ರೀನಿವಾಸಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೦೮೧೫೭-೨೪೬೨೨೨, ಮುಳಬಾಗಿಲು ೦೮೧೫೯-೨೪೨೦೪೯, ಕೆಜಿಎಫ್ ೦೮೧೫೩-೨೭೦೪೦೪, ಬಂಗಾರಪೇಟೆ-೦೮೧೫೩-೨೫೫೨೬೩, ಕೋಲಾರ ೦೮೧೫೨-೨೨೨೦೫೬, ಮಾಲೂರು ೦೮೧೫೧-೨೩೨೬೯೯ ಆಗಿದೆ. ಇದಲ್ಲದೆ ಮೊಬೈಲ್‌ನಲ್ಲಿ ಸಿ ವಿಸಿಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ದೂರು ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ಅಧಿಕಾರಿಗಳ ತಂಡ ನಿಗಾ ಇಡಲಿದ್ದು, ಬ್ಯಾನರ್ ಬಂಟಿಂಗ್ಸ್ ಅಳವಡಿಕೆಗೆ ಶುಲ್ಕ ಕಟ್ಟಿ ಅನುಮತಿ ಪಡೆಯಬೇಕು. ಇನ್ನು ಮಾಧ್ಯಮ, ಪತ್ರಿಕೆಗಳು, ಯುಟ್ಯೂಬ್ ಚಾನೆಲ್‌ಗಳ ಮೇಲೂ ನಿಗಾ ವಹಿಸಲಾಗುವುದು ನಿಯಮಗಳನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮಕೈಗೊಳ್ಳಲಾಗುವುದಾಗಿ ತಿಳಿಸಿ, ನಿರ್ಭೀತಿಯಿಂದ ಪ್ರತಿಯೊಬ್ಬರೂ ನೈತಿಕವಾಗಿ ಮತದಾನ ಮಾಡಬೇಕೆಂದು ಕೋರಿದರು.
ಸಾರ್ವಜನಿಕರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಹಣ ತೆಗೆದು
ಕೊಂಡು ಹೋಗುವಾಗಲೂ ಅಗತ್ಯ ದಾಖಲೆ ಹೊಂದಿರಬೇಕು. ೧೦ಲಕ್ಷಕ್ಕಿಂತಲೂ ಹೆಚ್ಚಿನ ಹಣ ಸಾಗಾಟ ಕಂಡು ಬಂದರೆ ಆದಾಯ ತೆರಿಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು, ಅವರು ಎಲ್ಲವನ್ನೂ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದರು.