ಚುನಾವಣಾ ನಂತರವೂ ಅತಂತ್ರ ಸ್ಥಳೀಯ ಸಂಸ್ಥೆ : ಎರಡು ವರ್ಷ ಅವಧಿ

 • ಚುನಾಯಿತ ಸದಸ್ಯರಿಗೆ ಅಧಿಕಾರ ಭಾಗ್ಯ ಎಂದು? – ನಿರೀಕ್ಷೆ ನಿಜವಾಗುವುದೇ?
  ರಾಯಚೂರು.ಸೆ.03- ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಗಳ ಚುನಾಯಿತ ಫಲಿತಾಂಶ ಪ್ರಕಟಗೊಂಡು ಇಂದಿಗೆ ಎರಡು ವರ್ಷ ಕಳೆದಿದ್ದರೂ, ಇನ್ನೂ ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬಾರದೇ, ಆಡಳಿತಾಧಿಕಾರಿಗಳ ದರ್ಬಾರಿನಲ್ಲಿ ಸದಸ್ಯರು ಅತಂತ್ರಗೊಳ್ಳುವಂತಾಗಿದೆ.
  2018 ರಲ್ಲಿ ನಗರ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗಿತ್ತು. ಸೆ.03 ರಂದು ಫಲಿತಾಂಶ ಪ್ರಕಟಗೊಂಡಿತ್ತು. ಇನ್ನೇನು ನಗರಸಭೆ ಆಡಳಿತ ನಿರ್ವಹಿಸುವ ಕನಸಿನೊಂದಿಗೆ ಪ್ರಮಾಣ ಪತ್ರ ಸ್ವೀಕರಿಸಿ, ಕಾಯುವ ಸದಸ್ಯರಿಗೆ ಎರಡು ವರ್ಷ ಕಳೆದರೂ, ಇನ್ನೂವರೆಗೂ ಅಧಿಕಾರ ಭಾಗ್ಯ ದೊರೆಯದೇ ಅತಂತ್ರದಲ್ಲಿಯೇ ಕಾಲ ಕಳೆಯುವಂತಾಗಿದೆ. ಸಮ್ಮಿಶ್ರ ಸರ್ಕಾರ ಮೀಸಲಾತಿ ನಿಗದಿ ಎಡವಟ್ಟು ತಂದ ಬಿಕ್ಕಟ್ಟು ಸ್ಥಳೀಯ ಸಂಸ್ಥೆಗಳ ಇತಿಹಾಸದಲ್ಲಿಯೇ ಚುನಾವಣೆ ನಂತರ ಎರಡು ವರ್ಷದವರೆಗೂ ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬಾರದ ಪ್ರಸಂಗಕ್ಕೆ ದಾರಿ ಮಾಡಿದೆ.
  ಸೆಪ್ಟೆಂಬರ್ 6 ಮತ್ತು 9 ರಂದು ಹೊರಡಿಸಲಾದ ಎರಡು ಪ್ರತ್ಯೇಕ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಗೊಂದಲ ಸಂತೃಪ್ತರು ನ್ಯಾಯಾಲಯಕ್ಕೆ ಮೊರೆ ಹೋಗಲು ಕಾರಣವಾಯಿತು. ಸಿಂಧನೂರು ಸೇರಿದಂತೆ ರಾಜ್ಯದ ಸುಮಾರು 13 ನಗರ, ಪುರಸಭೆ ಸದಸ್ಯರ ಆಕ್ಷೇಪಣೆ ಸ್ಥಳೀಯ ಸಂಸ್ಥೆಗಳ ಚುನಾವಣೆ ತೆಡೆಗೆ ಬಂಡೆಗಲ್ಲಾಗಿತ್ತು. ರಾಜ್ಯದಲ್ಲಿ ರಾಜಕೀಯ ಅತಂತ್ರ, ಸರ್ಕಾರದ ಬದಲಾವಣೆ ಈ ಸಮಸ್ಯೆ ಮತ್ತಷ್ಟು ಜಟಿಲಕ್ಕೆ ಕಾರಣವಾಯಿತು. ನ್ಯಾಯಾಲಯದಲ್ಲಿ ವರ್ಷಘಟ್ಟಲೇ ಮೀಸಲಾತಿ ವಿವಾದ ನೆನೆಗುದಿಗೆ ಬಿದ್ದು, ಸದಸ್ಯರು ಅಧಿಕಾರವಿಲ್ಲದೇ, ಸ್ಥಳೀಯ ಸಂಸ್ಥೆಯ ಚಟುವಟಿಕೆಗಳಿಂದ ದೂರ ಉಳಿಯಲು ಕಾರಣವಾಯಿತು.
  ಈ ಎರಡು ವರ್ಷದ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಬದಲಾಯಿತು. ಕೊರೊನಾ ಲಾಕ್ ಡೌನ್ ಪೂರ್ವ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡು ಸದಸ್ಯರಿಗೆ ನೋಟೀಸ್ ಜಾರಿಗೊಳಿಸಲಾಗಿತ್ತು. ಇನ್ನೇನು ಚುನಾವಣೆ ನಡೆಯುವ ಹಂತದಲ್ಲಿ ಮತ್ತೇ ನ್ಯಾಯಾಲಯದ ತಡೆಯಾಜ್ಞೆ ಚುನಾವಣೆ ಮತ್ತೇ ಅತಂತ್ರಕ್ಕೆ ಸಿಕ್ಕುವಂತಾಯಿತು. ಹೀಗೆ ಒಂದಿಲ್ಲೊಂದು ಕಾರಣಗಳಿಂದ ಮುಂದೂಡತ್ತಲೇ ಬಂದ ಚುನಾವಣೆ ಎರಡು ವರ್ಷ ಕಳೆದರೂ, ನ‌ಡೆಸಲು ಸಾಧ್ಯವಾಗದ ಕಗ್ಗಂಟಾಗಿ ಮಾರ್ಪಟ್ಟಿದೆ.
  ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರಕ್ಕೆ ಸ್ಪಂದಿಸಿದ ನ್ಯಾಯಾಲಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಂಬಂಧಿಸಿ ನಿರ್ದಿಷ್ಟ ಮಾರ್ಗಸೂಚಿಗಳೊಂದಿಗೆ ಮೀಸಲಾತಿ ಆಕ್ಷೇಪಣೆಗೆ ಅಧಿಸೂಚನೆ ಹೊರ‌ಡಿಸಲು ಆದೇಶಿಸಿದೆ. ನ್ಯಾಯಾಲಯದ ಸೂಚನೆಯಂತೆ ರಾಜ್ಯ ಸರ್ಕಾರ ಕಳೆದ ತಿಂಗಳು 27 ರಂದು ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಸ್ಥಳೀಯ ಸಂಸ್ಥೆ ಸೂಚನಾ ಫಲಕದಲ್ಲಿ ಆಕ್ಷೇಪಣೆಗಳನ್ನು ಪ್ರಕಟಿಸಲಾಗಿದೆ.
  ಮುಂದಿನ 15 ದಿನಗಳಲ್ಲಿ ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಡಿಸಿ, ಚುನಾವಣೆ ಪ್ರಕ್ರಿಯೆಗೆ ಆದೇಶ ಹೊರಡಿಸುವ ಸಾಧ್ಯತೆಗಳಿವೆ. ಎಲ್ಲವೂ ಸುಸೂತ್ರವಾಗಿ ನಡೆದರೇ, ಅಕ್ಟೋಬರ್ ಕೊನೆ ವೇಳೆಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯವ ಸಾಧ್ಯತೆಗಳು ನಿರೀಕ್ಷಿತವಾಗಿವೆ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಯಲ್ಲಿ ಪುನರಾವರ್ತಿಯಾಗದಂತೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಈ ಎಲ್ಲಾ ಮಾರ್ಗಸೂಚಿ ಅನುಸಾರ ಸರ್ಕಾರ ಮೀಸಲಾತಿ ನಿಗದಿಗೊಂಡರೇ, ಚುನಾವಣೆ ಸುಗಮವಾಗಿ ನಿರ್ವಹಣೆಗೊಂಡು ಸ್ಥಳೀಯ ಸಂಸ್ಥೆಗಳು ಎರಡು ವರ್ಷಗಳ ನಂತರವಾದರೂ ಅಧಿಕಾರ ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬರುವ ಸಾಧ್ಯತೆ ನಿರೀಕ್ಷಿಸಬಹುದಾಗಿದ್ದು, ಸರ್ಕಾರ ಈ ವಿಷಯದಲ್ಲಿ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆಂದು ಕಾದು ನೋಡಬೇಕಾಗಿದೆ.