ಚುನಾವಣಾ ತರಬೇತಿ ವೇಳೆ ಮತಗಟ್ಟೆ ಅಧಿಕಾರಿ,ಸಿಬ್ಬಂದಿಗೆ ಕೋವಿಡ್ ಲಸಿಕೆ ಕೊಡಿಸಿದ ಜಿಲ್ಲಾಧಿಕಾರಿಗಳು

ಬೀದರ ಏ. 08: ನಗರದ ಪೂಜ್ಯ ಶ್ರೀ ಡಾ.ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಏಪ್ರಿಲ್ 06 ರಂದು ಜಿಲ್ಲಾಡಳಿತದಿಂದ ನಡೆದ ಚುನಾವಣಾ ತರಬೇತಿಯಲ್ಲಿ ಪಾಲ್ಗೊಂಡಿದ್ದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆ ಮತ್ತು ಕೋವಿಡ್ ಲಸಿಕೆ ನೀಡಲಾಯಿತು.
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಖುದ್ದು ತಾವೇ ತರಬೇತಿ ಸ್ಥಳದಲ್ಲಿ ನಿಂತು, ಚುನಾವಣಾ ತರಬೇತಿ ಸ್ಥಳಕ್ಕೆ ವೈದ್ಯಾಧಿಕಾರಿಗಳ ತಂಡವನ್ನು ಕರೆಯಿಸಿದರು. ಚುನಾವಣಾ ತರಬೇತಿಯ ಮಧ್ಯಾಹ್ನ ಊಟದ ವಿರಾಮದ ವೇಳೆಯಲ್ಲಿ ಎರಡ್ಮೂರು ಕಡೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಕೋವಿಡ್ ಲಸಿಕೆಯನ್ನು ಕೊಡಿಸುವ ಮತ್ತು ಅವರ ಸ್ವ್ಯಾಬ್ ಪಡೆದುಕೊಳ್ಳುವ ವ್ಯವಸ್ಥೆ ಮಾಡಿಸಿದರು.
ಇದೆ ಸಂದರ್ಭದಲ್ಲಿ 110 ಜನರಿಂದ ಸ್ವ್ಯಾಬ್ ಸಂಗ್ರಹಿಸಲಾಯಿತು. 90 ಜನರಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಯಿತು. ಬ್ರಿಮ್ಸ್, ಜಿಲ್ಲಾಸ್ಪತ್ರೆ, 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ನೌಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್-19 ಪರೀಕ್ಷೆ ಮತ್ತು ಕೋವಿಡ್-19 ಲಸಿಕಾ ನೀಡಿಕೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, 45 ವರ್ಷ ವಯಸ್ಸಿಗಿಂತ ಹೆಚ್ಚಿರುವ ಪ್ರತಿಯೊಬ್ಬ ನಾಗರಿಕರು, ಸರ್ಕಾರಿ ನೌಕರರು, ಖಾಸಗಿ ನೌಕರರು ಅಥವಾ ಯಾರೇ ಹಿರಿಯ ನಾಗರೀಕರು ಎಲ್ಲರಿಗೂ ಕೂಡ ಕೋವಿಡ್ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ದಯವಿಟ್ಟು ಎಲ್ಲರೂ ತಮ್ಮ ತಮ್ಮ ಹತ್ತಿರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿ ನೀಡುವ ಫಾರಂ ಪಡೆದು, ಅದರಲ್ಲಿ ಮಾಹಿತಿ ಸೇರಿಸಿ ಗುರುತಿನ ಚೀಟಿಯನ್ನು ತೋರಿಸಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಈಗಾಗಲೇ ಕೋವಿಶಿಲ್ಡ್ ತೆಗೆದುಕೊಂಡವರು 4 ವಾರದಿಂದ 6 ವಾರದೊಳಗಾಗಿ ಎರಡನೇ ಡೋಸ್‍ನ್ನು ಪಡೆದುಕೊಳ್ಳಬೇಕೆಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಕೋವ್ಯಾಕ್ಸಿನ್ ಲಸಿಕೆಯನ್ನು ಕೂಡ ನಿಯಮಾನುಸಾರ ಮೊದಲನೇ ಮತ್ತು ಎರಡನೇ ಡೋಸ್ ಪಡೆದುಕೊಳ್ಳಬೇಕು ಎಂದರು.
ಹಿರಿಯರಿಗೆ ಲಸಿಕೆ ಕೊಡಿಸಿ: ನಾವೆಲ್ಲರೂ ಚಿಕ್ಕವರಿದ್ದಾಗ ನಮಗೆ ನಮ್ಮ ತಂದೆ-ತಾಯಿಯವರು ನಮ್ಮನ್ನು ಪೆÇೀಷಿಸಿದ್ದಾರೆ. ಈಗ ಹಿರಿಯ ನಾಗರಿಕರು ಮಕ್ಕಳ ತರಹ ಇರುತ್ತಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರಿಗೆ ಈ ಲಸಿಕೆಯನ್ನು ತಪ್ಪದೇ ಕೊಡಿಸಲು ನಾವು ಕಾಳಜಿ ವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಮ್ಮ ಪ್ರಯತ್ನ ತಿಳಿಸಿದ ಜಿಲ್ಲಾಧಿಕಾರಿಗಳು: ತಾವು ಕೂಡ ತಮ್ಮ ತಂದೆ-ತಾಯಿಯವರಿಗೆ ಬಹಳಷ್ಟು ಒತ್ತಾಯ ಮಾಡಿ, ಅವರಲ್ಲಿದ್ದ ತಪ್ಪು ತಿಳಿವಳಿಕೆಗಳನ್ನು, ಸಂಶಯಗಳನ್ನು ಹೋಗಲಾಡಿಸಿ, ಕೋವಿಡ್-19 ಲಸಿಕೆಯ ಬಗ್ಗೆ ಮನವರಿಕೆ ಮಾಡಿ, ವಿವರವಾಗಿ ಹೇಳಿ ಲಸಿಕೆಯನ್ನು ಹಾಕಿಸಿರುತ್ತೇನೆ ಎಂದು ತಮ್ಮ ಪ್ರಯತ್ನವನ್ನು ತಿಳಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರು ಕೂಡ ಈ ರೀತಿಯ ಕಾಳಜಿ ವಹಿಸಿ, ಹಿರಿಯರಿಗೆ ಲಸಿಕೆಯನ್ನು ಕೊಡಿಸಬೇಕು ಎಂದು ಮನವಿ ಮಾಡಿದರು.
ಭಯ-ಭೀತಿಗೆ ಅವಕಾಶ ಕೊಡಬೇಡಿ: ಕೋವಿಡ್ ಲಸಿಕೆಯ ಬಗ್ಗೆ ಯಾವುದೇ ರೀತಿಯ ಭಯ, ಬೀತಿಗೆ ಅವಕಾಶ ಕೊಡಬೇಡಿರಿ. ಕೋವಿಡ್ ಲಸಿಕೆ ಪಡೆದರು ಕೂಡ ಕೋವಿಡ್ ಬರುತ್ತದೆ ಎನ್ನುವ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿರಿ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಕೋವಿಡ್ ಬಾರದ ಹಾಗೆ ಅದನ್ನು ತಡೆಯಲು ಮತ್ತು ಮುಖ್ಯವಾಗಿ ಕೋವಿಡ್ ತೀವ್ರರೀತಿಯಲ್ಲಿ ಭಾದಿಸದ ಹಾಗೆ ಈ ಲಸಿಕೆಯು ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದ ಏಮ್ಸ್ ನಿರ್ದೇಶಕರ ಮಾತನ್ನು ತಾವು ಈ ಸಂದರ್ಭದಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದರು.
ಸರ್ಕಾರಿ ಲಸಿಕೆಯ ಮೇಲೆ ನಂಬಿಕೆ ಇಡಬೇಕು: ಸರ್ಕಾರಿ ಲಸಿಕೆಯ ಮೇಲೆ ಎಲ್ಲರೂ ನಂಬಿಕೆಯನ್ನಿಟ್ಟುಕೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ಎಲ್ಲರೂ ಲಸಿಕೆಯನ್ನು ಪಡೆದುಕೊಂಡು ಜೀವನವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿಗಳು, ಸರ್ಕಾರಿ ವ್ಯಾಕ್ಸಿನ್ ಮೇಲೆ ನಂಬಿಕೆ ಇಟ್ಟು ಎಲ್ಲರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್‍ಗಳನ್ನು ಪಡೆದು ಸುರಕ್ಷಿತವಾಗಿ ಜೀವ ಉಳಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ತಹಸೀಲ್ದಾರ ಗಂಗಾದೇವಿ ಸಿ.ಎಚ್., ಬ್ರಿಮ್ಸ ಆಸ್ಪತ್ರೆಯ ಡಾ.ಮಹೇಶ ತೊಂಡಾರೆ, 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೊಹೇಲ್ ಹಾಗೂ ಇನ್ನೀತರರು ಇದ್ದರು.