
ಗದಗ,ಏ29: ಭಾರತ ಚುನಾವಣಾ ಆಯೋಗ, ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯಿಂದ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ, ಎಮ್.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಹಾಗೂ ಯು.ಆರ್.ಡಬ್ಲ್ಯೂಗಳಿಗೆ ಹಾಗೂ ಇಲಾಖೆಯಡಿ ಸ್ವಯಂ ಸೇವಾ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಿರುವ ಶ್ರವಣ ನ್ಯೂನ್ಯತೆವುಳ್ಳ ವಿಶೇಷ ಶಾಲೆಯ ಸನ್ನೆ ಭಾಷೆಯ ಶಿಕ್ಷಕರಿಗೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಗುರುವಾರದಂದು ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸನ್ನೆ ಭಾಷೆ ಕುರಿತು ಚುನಾವಣಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಾಸ್ಟರ್ ಟ್ರೇನರ್ ಬಸವರಾಜ ಗಿರಿತಮ್ಮಣ್ಣವರ ಅವರು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾರತ ಚುನಾವಣಾ ಆಯೋಗದಿಂದ ಒಳಗೊಳ್ಳುವಿಕೆ ಸಂದೇಶದನ್ವಯ ಮೇ 10 ರಂದು ಬೆ 7 ರಿಂದ ಸಂಜೆ 6 ರವರೆಗೆ ನಡೆಯುವ ಚುನಾವಣೆಯಲ್ಲಿ ವಿಕಲಚೇತನರು (ವಿಶೇಷವಾಗಿ ವಾಕ್ ಮತ್ತು ಶ್ರವಣ ದೋಷವುಳ್ಳ) ಹಾಗೂ ಹಿರಿಯ ನಾಗರಿಕರು ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಚುನಾವಣಾ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಗಿದೆ, ಮತದಾನ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕಾರ್ಯ, ಮತಕೇಂದ್ರ/ಮತಗಟ್ಟೆಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಹಾಗೂ ಮತದಾರರು ಮತ ಚಲಾಯಿಸಲು ತೆಗೆದುಕೊಂಡು ಹೋಗಬೇಕಾದ ದಾಖಲೆಗಳ ಕುರಿತು ತಿಳಿಸಿದರು. ಎಮ್.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಹಾಗೂ ಯು.ಆರ್.ಡಬ್ಲ್ಯೂಗಳಿಗೆ ಮತಕೇಂದ್ರಗಳಿಗೆ ಬರುವ ವಿಕಲಚೇತನರಿಗೆ ಸನ್ನೆ ಭಾಷೆ ತರಬೇತಿಯ ಕುರಿತು ವಿವರಿಸಿದರು.
ಶ್ರೀದೇವಿ. ಶಿ. ವಾಲಿಶೆಟ್ರ ಹಾಗೂ ನಿಂಗಪ್ಪ ರೋಣದ ಇವರು ಸನ್ನೆ ಭಾಷೆ ಮೂಲಕ ಮಾಹಿತಿಯನ್ನು ತರ್ಜುಮೆ ಮಾಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಮ್.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಹಾಗೂ ಯು.ಆರ್.ಡಬ್ಲ್ಯೂಗಳು ಪ್ರಶ್ನೆಗಳನ್ನು ಕೇಳುವುದರ ಮೂಲಕ ತಮ್ಮಲ್ಲಿರುವ ಗೊಂದಲಗಳಿಗೆ ಪರಿಹಾರ ಪಡೆದುಕೊಂಡರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ. ಮಹಾಂತೇಶ ಅವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಗೆ ವಂದಿಸಿದರು.