ಚುನಾವಣಾ ಜಾಹೀರಾತು ಮುದ್ರಣಕ್ಕೆ ಅನುಮತಿ ಕಡ್ಡಾಯ : ಜಿಲ್ಲಾಧಿಕಾರಿ ಸ್ನೇಹಲ್.ಆರ್

ಯಾದಗಿರಿ : ಏ. 13 : ವಿಧಾನಸಭಾ ಚುನಾವಣಾ ಅಂಗವಾಗಿ ಚುನಾವಣಾ ಪ್ರಚಾರಕ್ಕೆ ಸಂಬಂಧಪಟ್ಟಂತೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವ ಮುನ್ನ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರು ತಿಳಿಸಿದ್ದಾರೆ.

 ಮುದ್ರಣ ಮಾಧ್ಯಮಕ್ಕೆ ಸಂಬಂಧಪಟ್ಟಂತೆ ಜಾಹೀರಾತು ನೀಡುವ ಮುಂಚೆ ಆಯಾ ಪಕ್ಷಗಳ ಪ್ರತಿನಿಧಿಗಳಾಗಿದ್ದಲ್ಲಿ ಸಂಬಂಧಪಟ್ಟ ಪಕ್ಷದ ಅಭ್ಯರ್ಥಿಯ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಪಕ್ಷದ ಅಭ್ಯರ್ಥಿಯ ಮಾಹಿತಿ ಇಲ್ಲದೆ ಜಾಹಿರಾತು ನೀಡಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
 ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಜಾಹೀರಾತು ನೀಡಬೇಕಾದಲ್ಲಿ ಅಧಿಕೃತ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟಂತೆ ಜಾಹೀರಾತು ವಿಷಯವನ್ನು ಮೂರು ದಿನಗಳ ಮುಂಚಿತವಾಗಿ ನಿಗದಿತ ನಮೂನೆಯ ಅರ್ಜಿಯನ್ನು ಜಿಲ್ಲಾ ಮಾಧ್ಯಮ ದೃಢೀಕರಣ ಹಾಗೂ ಕಣ್ಗಾವಲು ಸಮಿತಿಗೆ ಸಲ್ಲಿಸಿ ಅನುಮತಿ ಪಡೆಯಬೇಕಾಗಿರುತ್ತದೆ. ರಾಜಕೀಯ ಪಕ್ಷ ಹೊರೆತುಪಡಿಸಿ ಇತರರು ಜಾಹೀರಾತು ನೀಡ ಬಯಸಿದ್ದಲ್ಲಿ ಏಳು ದಿನಗಳ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.  ಅದರಂತೆ ಜಾಹೀರಾತಿಗಾಗಿ ನಿಗದಿತ ನಮೂನೆಯ ಅರ್ಜಿಯೊಂದಿಗೆ ಜಾಹೀರಾತಿನ ವಿಷಯ ಒಳಗೊಂಡ ಸಿಡಿ ರೂಪದಲ್ಲಿ ಅಥವಾ ಇತರೆ ಅವಶ್ಯಕ ದಾಖಲೆ ರೂಪದಲ್ಲಿ ಸಲ್ಲಿಸಬೇಕು ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಸಮಿತಿಯು ಅನುಮತಿ ನೀಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
 ಒಟ್ಟಾರೆ ವಿವಿಧ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ವೆಚ್ಚವನ್ನು ಆಯಾ ಅಕೌಂಟಿಂಗ್ ತಂಡ ಎಕ್ಸಪೇಂಡಿಚರ್ ಅಬ್ಸರ್ವರ್ ತಂಡದ ಮೂಲಕ ಆಯಾ ಅಭ್ಯರ್ಥಿಗಳ ವೆಚ್ಚಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದ ಅವರು ಬರುವ ಚುನಾವಣೆಗಾಗಿ ಪ್ರತಿ ಅಭ್ಯರ್ಥಿಗೆ 40 ಲಕ್ಷ ರೂ.ಗಳ ವೆಚ್ಚವನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ ಎಂದು ತಿಳಿಸಿದ್ದಾರೆ.
 ಕಾಸಿಗಾಗಿ ಸುದ್ದಿ ಪ್ರಕಟಿಸಿದ್ದಲ್ಲಿ ಕ್ರಮ : ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಕಾಸಿಗಾಗಿ ಸುದ್ದಿ ಪ್ರಕಟಿಸದಂತೆ ಅವರು ಮನವಿ ಮಾಡಿದ್ದಾರೆ.
 ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ : ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಟ್ವಿಟ್ಟ ವ್ಯಾಟ್ಸಪ್ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಹಿತಿಯನ್ನು ಪೆÇೀಸ್ಟ್ ಮಾಡಿದ್ದಲ್ಲಿ ಸಂಬಂಧಪಟ್ಟ ಅಡ್ಮಿನ್ ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಕಾರಣ ಸಾಮಾಜಿಕ ಜಾಲತಾಣಗಳ ಮೂಲಕ ಯಾವುದೇ ರೀತಿಯ ಪ್ರಚಾರ ಕೈಗೊಳ್ಳುವ ಮುಂಚೆ ಜಿಲ್ಲಾಧಿಕಾರಿಗಳ ಸಮಕ್ಷಮ ಘೋಷಣಾ ಪತ್ರ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ ಇಂತಹ ಜಾಲತಾಣಗಳ ಮೇಲೆ ತಂಡದ ಮೂಲಕ ನಿಗಾ ಸಹ ಇಡಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.