ಚುನಾವಣಾ ಗುರುತಿನ ಚೀಟಿಗಾಗಿ ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಿ: ಜಿ.ಪಂ. ಸಿಇಒ ಗಾಯಿತ್ರಿ

ಚಾಮರಾಜನಗರ, ನ.24:- ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಗುರುತಿನ ಚೀಟಿಗಳನ್ನು ಪಡೆಯಲು ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಿ ನೊಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯ ಆವರಣದಲ್ಲಿಂದು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ಅಂಗವಾಗಿ ಕಾರ್ ಬೆಟಾಲಿಯನ್ ಎನ್.ಸಿ.ಸಿ ಹಾಗೂ ಸಿಮ್ಸ್ ಎನ್.ಸಿ.ಸಿ ವಿಭಾಗ ಮತ್ತು ಸಿಮ್ಸ್ ಕಾಯಕಲ್ಪ ಸಹಯೋಗದೊಂದಿಗೆ ಆಸ್ಪತ್ರೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಮತದಾನದ ಕುರಿತು ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲಾ ಅರ್ಹ ಭಾರತೀಯ ನಾಗರಿಕರು ಚುನಾವಣಾ ಗುರುತಿನ ಚೀಟಿಗಳನ್ನು ಪಡೆಯಲು ಮೊಬೈಲ್ ಆಪ್ (ಚುನಾವಣಾ ಆಯೋಗದ ವೋಟರ್ ಹೆಲ್ತ್‍ಲೈನ್ ಆಪ್) ಮೂಲಕ ಅರ್ಜಿ ಸಲ್ಲಿಸಿ ನೊಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಚುನಾವಣಾ ಗುರುತಿನ ಚೀಟಿ ಹೊಂದಿರುವವರು ಮೊಬೈಲ್ ಆಪ್ ಮೂಲಕ ನೊಂದಾಯಿತರಾಗಿರುವುದನ್ನು ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು.
ಸಿಮ್ಸ್ ನಿರ್ದೇಶಕರು ಹಾಗೂ ಡೀನ್ ಡಾ. ಜಿ.ಎಂ ಸಂಜೀವ್, ಪ್ರಾಂಶುಪಾಲರಾದ ಡಾ. ಗಿರೀಶ್ ವಿ. ಪಾಟೀಲ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಹೆಚ್.ಎಸ್. ಕೃಷ್ಣಪ್ರಸಾದ್, ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥರು ಹಾಗೂ ಎನ್‍ಸಿಸಿ ಅಧಿಕಾರಿ ಡಾ. ಸಿ.ವಿ. ಮಾರುತಿ, ಸ್ವೀಪ್ ನೋಡಲ್ ಅಧಿಕಾರಿ ಡಾ. ಎಂ.ಕೆ. ವೇದಶ್ರೀ, ಕಾಯಕಲ್ಪ ನೋಡಲ್ ಅಧಿಕಾರಿ ಡಾ. ಕೆ. ಮುರುಗೇಶ್, ಸಿಮ್ಸ್ ಟೀಚರ್ ಅಸೋಸಿಯೇಶನ್ ಕಾರ್ಯದರ್ಶಿ ಡಾ. ಬಿ. ಗಿರೀಶ್, ಪ್ರಾಂಶುಪಾಲರು ಹಾಗೂ ಇನ್ನಿತರ ಬೋಧಕ ಬೋಧಕೇತರ ಸಿಬ್ಬಂದಿಗಳು, ಎನ್‍ಸಿಸಿ, ಎಂಬಿಬಿಎಸ್ ಹಾಗೂ ಇತರೆ ಕೋರ್ಸ್‍ಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆವರಣದಲ್ಲಿ ಸ್ವೀಪ್ ಸಮಿತಿಯಿಂದ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ 125 ಹರ್ಬಲ್ ಗಿಡಗಳನ್ನು ನೆಡಲಾಯಿತು.