ಸಂಜೆವಾಣಿ ವಾರ್ತೆ
ಹೊಸಪೇಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸುವ ಸಿಬ್ಬಂದಿಗಳಿಗೆ ಅದರಲ್ಲೂ ಶಿಕ್ಷಕರಿಗೆ ಕೆಲ ಅಂಶಗಳನ್ನು ಗಮನಿಸಿ ನಿಯೋಜಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಹಾಯಕ ಆಯುಕ್ತರ ಮೂಲಕ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಈ ಕುರಿತು ಗುರುವಾರ ಹೊಸಪೇಟೆ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿದ ಸಂಘದ ಅಧ್ಯಕ್ಷ ಕೆ.ಬಸವರಾಜ ಮತ್ತು ಪದಾಧಿಕಾರಿಗಳು ತಮ್ಮ ಮನವಿಯಲ್ಲಿ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ವಿನಾಯತಿ ನೀಡಬೇಕು, ಮಹಿಳಾ ಸಿಬ್ಬಂದಿಗಳನ್ನು ತಾಲೂಕಿನ ಒಳಗಡೆಯೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು, ಗರ್ಭಿಣಿ, ತೀವ್ರತರನಾದ ಕಾಯಿಲೆಯಿಂದ ಬಳಲುವ, ಚಿಕ್ಕಮಕ್ಕಳನ್ನು ಹೊಂದಿರುವ ಶಿಕ್ಷಕಿಯರ ಕರ್ತವ್ಯಕ್ಕೆ ವಿನಾಯಿತಿ ನೀಡಬೇಕು, ಕರ್ತವ್ಯ ಸ್ಥಳದಲ್ಲಿ ಶೌಚಾಲಯ ಹಾಗೂ ಮೂಲಸೌಕರ್ಯಗಳು ಇರುವಂತೆ ಮಾಡಬೇಕು, ಕರ್ತವ್ಯ ಮುಗಿದ ನಂತರ ಸ್ವಂತ ಸ್ಥಳಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡುವುದು ಸೇರಿದಂತೆ ಯಾವುದೆ ಸಿಬ್ಬಂದಿಗಳಿಗೂ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಮನವಿಯಲ್ಲಿ ಮುಖ್ಯ ಚುನಾವಣಾಧಿಕಾರಿಗಳನ್ನು ಉಪವಿಭಾಗಾಧಿಕಾರಿಗಳ ಮೂಲಕ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಲ್ಲಯ್ಯ, ಖಚಾಂಚಿ ನಾಯ್ಕ್, ನೌಕರರ ಸಂಘದ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ್ ಸಂಚಾಲಕ ಗುರುಬಸವರಾಜ್, ನಾಮನಿರ್ದೇಶಿತ ಸದಸ್ಯ ಪ್ರಕಾಶ, ನಿಸಾರ್ ಅಹಮ್ಮದ್ ಸೇರಿದಂತೆ ಇತರರು ಹಾಜರಿದ್ದರು.